ಬೆಂಗಳೂರು: ಇತ್ತೀಚೆಗೆ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಫೋನ್ ಪೆ ಆಪ್ ಸಂಸ್ಥಾಪಕ ಸಮೀರ್ ನಿಗಮ್ ಈಗ ಕ್ಷಮೆ ಯಾಚಿಸಿದ್ದಾರೆ. ಇದರ ಹಿಂದೆ ಕಿಚ್ಚ ಸುದೀಪ್ ಇದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕಿಚ್ಚ ಸುದೀಪ್ ಫೋನ್ ಪೆ ಆಪ್ ಗೆ ಕರ್ನಾಟಕದಲ್ಲಿ ಬ್ರ್ಯಾಂಡ್ ಅಂಬಾಸಿಡರ್. ಫೋನ್ ಪೆ ಆಪ್ ಜಾಹೀರಾತುಗಳಲ್ಲಿ ಕಿಚ್ಚ ಸುದೀಪ್ ಇರುವುದನ್ನು ನೀವು ಗಮನಿಸಿರಬಹುದು. ಇದೀಗ ಕನ್ನಡಿಗರ ಬಗ್ಗೆ ವಿವಾತ್ಮಕ ಹೇಳಿಕೆ ನೀಡಿದ್ದ ಫೋನ್ ಪೆ ಸಂಸ್ಥಾಪಕರು ಕ್ಷಮೆ ಯಾಚಿಸಿರುವುದಕ್ಕೂ ಸುದೀಪ್ ಕಾರಣ ಎನ್ನಲಾಗುತ್ತಿದೆ.
ಸಮೀರ್ ನಿಗಮ್ ಹೇಳಿದ್ದೇನು: ನನಗೀಗ 46 ವರ್ಷ. ಯಾವ ರಾಜ್ಯದಲ್ಲೂ 15 ವರ್ಷಕ್ಕಿಂತ ಹೆಚ್ಚು ಕಾಲ ವಾಸಿಸಲಿಲ್ಲ. ನನ್ನ ತಂದೆ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶದಾದ್ಯಂತ ಕೆಲಸ ಮಾಡಿದ್ದಾರೆ. ಆದರೆ ನನ್ನ ಮಕ್ಕಳು ಕರ್ನಾಟಕದಲ್ಲಿ ಕೆಲಸ ಮಾಡಲು ಅರ್ಹರಲ್ಲವೇ? ನಾನು ಹಲವಾರು ಜನರಿಗೆ ಉದ್ಯೋಗ ನೀಡಿದ್ದೇನೆ. ನನ್ನ ಮಕ್ಕಳ ತಮ್ಮ ತವರು ನೆಲದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ಇದು ಅವಮಾನ ಎಂದಿದ್ದರು.
ಖಾಸಗಿ ಉದ್ಯಮದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿರೋಧಿಸಿ ಅವರ ಈ ಹೇಳಿಕೆಗೆ ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅನೇಕರು ಫೋನ್ ಪೆ ಆಪ್ ನ್ನು ಅನ್ ಇನ್ ಸ್ಟಾಲ್ ಮಾಡಿ ಬಹಿಷ್ಕಾರ ಅಭಿಯಾನ ಆರಂಭಿಸಿದ್ದರು. ಇದು ಕಿಚ್ಚ ಸುದೀಪ್ ಗಮನಕ್ಕೂ ಬಂದಿದೆ.
ಈ ಹಿನ್ನಲೆಯಲ್ಲಿ ಅವರು ಫೋನ್ ಪೆ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಕನ್ನಡಿಗರಿಗೆ ಕ್ಷಮೆ ಕೇಳದೇ ಇದ್ದರೆ ಕಂಪನಿ ಜೊತೆಗಿನ ರಾಯಭಾರ ಒಪ್ಪಂದವನ್ನು ರದ್ದುಗೊಳಿಸಲು ಹಿಂದೆ ಮುಂದೆ ನೋಡಲ್ಲ ಎಂದಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಸಮೀರ್ ನಿಗಮ್ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರಿಗೆ ಕ್ಷಮೆ ಕೇಳಿದ್ದಾರೆ. ಇದೆಲ್ಲದರ ಹಿಂದೆ ಕಿಚ್ಚ ಸುದೀಪ್ ಪಾತ್ರವೂ ಇದೆ ಎಂಬ ಮಾತು ಈಗ ದಟ್ಟವಾಗಿ ಕೇಳಿಬರುತ್ತಿದೆ.