ಬೆಂಗಳೂರು: ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಮೇಲೆ ಸಾಕು ನಾಯಿಯೊಂದು ದಾಳಿ ನಡೆಸಿದ್ದು, ಮಹಿಳೆ ಗಂಭೀರ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ನಗರದ ಎಚ್.ಎಸ್.ಆರ್ ಲೇಔಟ್ ಪ್ರದೇಶದಲ್ಲಿ ಜನವರಿ 26ರಂದು ಈ ಘಟನೆ ನಡೆದಿದ್ದು, ದಾಳಿಯಲ್ಲಿ ಮಹಿಳೆ ಕುತ್ತಿಗೆ ಸೇರಿದಂತೆ ಮುಖ, ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ನಾಯಿಯ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕವನ್ನು ಮೂಡಿಸಿದೆ.
ಹೆಚ್.ಎಸ್.ಆರ್ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ, ಬೆಳಿಗ್ಗೆ ಸುಮಾರು 6 ಗಂಟೆ 54 ನಿಮಿಷಕ್ಕೆ ಈ ಘಟನೆ ನಡೆದಿದೆ. ಮಹಿಳೆ ಪ್ರತಿದಿನದಂತೆ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದಾಗ ಸಮೀಪದ ಮನೆಯೊಂದಕ್ಕೆ ಸೇರಿದ ಸಾಕು ನಾಯಿ ಏಕಾಏಕಿ ದಾಳಿ ನಡೆಸಿದೆ.