Publish Date: Sun, 21 Dec 2025 (17:35 IST)
Updated Date: Sun, 21 Dec 2025 (17:38 IST)
ಮಂಗಳೂರು: ಪೊಲೀಸರ ನಿರ್ಬಂಧದ ನಡುವೆಯೂ ಕೋಳಿ ಅಂಕಕ್ಕೆ ಪ್ರಚೋದನೆ ಹಾಗೂ ಮಾಡಿಸಿದ ಆರೋಪದಡಿಯಲ್ಲಿ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಸೇರಿದಂತೆ 17 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕೇಪು ಎಂಬಲ್ಲಿ ಘಟನೆ ನಡೆದಿದೆ. ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 17 ಜನರ ಮೇಲೆ ವಿಟ್ಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಏನಿದು ಘಟನೆ: ಜಾತ್ರೆ ಪ್ರಯುಕ್ತ ನಡೆಯುವ ಕೋಳಿ ಅಂಕಕ್ಕೆ ಅನುಮತಿ ನೀಡಬೇಕೆಂದು ಸ್ಥಳಕ್ಕೆ ಬಂದ ಶಾಸಕ ಅಶೋಕ್ ರೈ ಹೇಳಿದ್ದಾರೆ. ಅದಲ್ಲದೆ ಯಾರ ಮೇಲೂ ಪ್ರಕರಣವನ್ನು ದಾಖಲಿಸಬಾರದು, ಹಾಗೇ ಆದರೆ ನನ್ನ ಮೇಲೆಯೇ ಮೊದಲು ಹಾಕಿ ಎಂದು ಸವಾಲು ಎಸೆದಿದ್ದರು.
ಇಲ್ಲಿ ಯಾವುದೇ ಜೂಜಾಟ ಆಗುವುದಿಲ್ಲ. ತಮ್ಮ ಮನೆಯಲ್ಲಿ ಸಾಕಿದ ಕೋಳಿಯನ್ನು ತಂದು ಕೋಳಿ ಅಂಕ ನಡೆಸುತ್ತಾರೆ. ಇದಕ್ಕೆ ಅನುಮತಿ ನೀಡಬೇಕೆಂದು ಅಶೋಕ್ ರೈ ಹೇಳಿ, ಮಾಡಿಸಿದ್ದರು.
ಕೋಳಿ ಕಾಳಗಕ್ಕೆ ಪೊಲೀಸರು ನಿರ್ಬಂಧ ಹೇರಿದ್ರೂ, ಪುತ್ತೂರು ಶಾಸಕ ಅಶೋಕ್ ರೈ ತಾನೇ ಮುಂದೆ ನಿಂತು ಕೋಳಿ ಅಂಕ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಹೀಗಾಗಿ ವಿಟ್ಲ ಠಾಣೆಯ ಪೊಲೀಸರು ಶಾಸಕ ಅಶೋಕ್ ರೈ ಸೇರಿದಂತೆ 17 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.