ರಾಯಚೂರು: ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿದೆ. ಇದಕ್ಕೆ ರಾಯಚೂರು ಜಿಲ್ಲೆಯಲ್ಲೇ ವಿರೋಧ ವ್ಯಕ್ತವಾಗಿದೆ.
ಧರ್ಮಸ್ಥಳದ ಬುರುಡೆ ಪ್ರಕರಣ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣ ಮಾತ್ರವಲ್ಲದೆ 32 ಪ್ರಕರಣಗಳನ್ನ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮಾನ್ವಿಗೆ ಕರೆತರದಂತೆ ಅಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂದು ವರ್ಷ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿದೆ. ಆದರೆ, ಅವರನ್ನು ಯಾವುದೇ ಕಾರಣಕ್ಕೂ ಜಿಲ್ಲೆಗೆ ಕರೆತರಬೇಡಿ ಎಂದು ರಾಯಚೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.
ದಲಿತ ಸೇನೆ ಹಾಗೂ ಸಮಾನ ಮನಸ್ಕರ ವೇದಿಕೆಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಹೋರಾಟ ಮಾಡಲಾಯಿತು. ರಾಯಚೂರು ಜಿಲ್ಲೆಗೆ ಬೇಡ, ಅದರ ಬದಲು ಯಾವುದಾದರೂ ಕಾಡಿಗೆ ಕಳುಹಿಸಿ. ರಾಯಚೂರು ಜಿಲ್ಲೆಗೆ ಕಳುಹಿಸಬೇಡಿ ಅಂತ ಹೋರಾಟಗಾರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.