ನೋಟ್ ಬುಕ್ ತಂದಿಲ್ಲ ಎಂಬ ಒಂದೇ ಕಾರಣಕ್ಕೆ ಆರನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ಥಳಿಸಿದ ಪರಿಣಾಮ ಆತ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವಿಜಯನಗರದಲ್ಲಿರುವ ಬ್ಲೂಬೆಲ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯ ಕಿವಿ ಮತ್ತು ಕಣ್ಣಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.
ನೋಟ್ ಬುಕ್ ತಂದಿಲ್ಲ ಎಂದಿದ್ದಕ್ಕೆ ಬೆಂಗಳೂರಿನ ಬ್ಲೂಬೆಲ್ ಶಾಲೆಯಲ್ಲಿ ವಿದ್ಯಾರ್ಥಿಗೆ ಶಿಕ್ಷಕ ಹಲ್ಲೆ ನಡೆಸಿದ್ದಾಗಿ ಪೋಷಕರು ಆರೋಪಿಸಿದ್ದು, ವಿದ್ಯಾರ್ಥಿಯ ಕಿವಿ ಮತ್ತು ಕಣ್ಣಿಗೆ ಬಲವಾದ ಏಟು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಣಿತ ಶಾಲೆಯ ಶಿಕ್ಷಕ ಹೊಡೆದಿದ್ದು, ಸೋಮವಾರ ಬಾಲಕನನ್ನು ವಾಣಿ ವಿಲಾಸ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಶುಕ್ರವಾರ ಸಂಜೆ 9.30ರ ಸುಮಾರಿಗೆ ಟ್ಯೂಷನ್ ಮುಗಿಸಿ ಮನೆಗೆ ವಾಪಸಾದ ಬಳಿಕ ಕಿವಿ ನೋವು ಎಂದು ವಿದ್ಯಾರ್ಥಿ ಪೋಷಕರಿಗೆ ಹೇಳಿದ್ದು, ಈ ವೇಳೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. "ತಮ್ಮ ಶಾಲೆಯಲ್ಲಿನ ಗಣಿತ ಶಿಕ್ಷಕರು ತರಗತಿಗೆ ನೋಟ್ ಬುಕ್ ತರಲು ಮರೆತಿದ್ದಕ್ಕಾಗಿ ಹೊಡೆದಿದ್ದಾರೆ ಎಂದು ಬಾಲಕ ನಮಗೆ ಹೇಳಿದ. ಏನಾಯಿತು ಎಂದು ಶಿಕ್ಷಕರನ್ನು ಕೇಳಲು ನಾವು ಅವನನ್ನು ಮೊದಲು ಶಾಲೆಗೆ ಕರೆದೊಯ್ದೆವು. ಆದರೆ ನಮ್ಮ ಮಗನ ಆರೋಗ್ಯದ ಸ್ಥಿತಿಯನ್ನು ನೋಡಿ ನಾವು ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ನಮ್ಮ ಮಗ ತೀವ್ರ ಕಿವಿ ನೋವು ಮತ್ತು ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ಲಕ್ಷ್ಮಿ ನರಸಿಂಹ ತಿಳಿಸಿದರು.