ಕಾರವಾರ: ಯಾರ ಹಂಗೂ ಇಲ್ಲದೇ ಹಾಡುತ್ತಿದ್ದ ಹಾಡು ಹಕ್ಕಿ ಈಗ ಹಾಡು ನಿಲ್ಲಿಸಿದೆ. ಪದ್ಮಶ್ರೀ ಪುರಸ್ಕೃತೆ ಜನಪದ ಹಾಡುಗಾರ್ತಿ ಸುಕ್ರಜ್ಜಿ ಇಹಲೋಕ ತ್ಯಜಿಸಿದ್ದಾರೆ.
88 ವರ್ಷದ ಸುಕ್ರಜ್ಜಿ ವಯೋಸಹಜ ಖಾಯಿಲೆಗಳಿಂದಾಗಿ ಇಂದು ಮುಂಜಾನೆ 3.30 ಕ್ಕೆ ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಬಡಿಗೇಡಿ ಗ್ರಾಮದವರು ಸುಕ್ರಜ್ಜಿ. ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದ ಸುಕ್ರಜ್ಜಿ ತಮ್ಮ ಹಾಡಿನ ಮೂಲಕವೇ ಗಮನ ಸೆಳೆದವರು.
ಅವರಿಗೆ ತಾಯಿಯೇ ಗುರುವಾಗಿದ್ದರು. ಹಾಡು ಹಕ್ಕಿಯಾಗಿದ್ದ ಸುಕ್ರಜ್ಜಿ ಸಾಂಪ್ರದಾಯಿಕ ಬುಡಕಟ್ಟು ಜನಾಂಗದವರ ಜನಪದ ಹಾಡುಗಳನ್ನು ಸಂರಕ್ಷಿಸಿಕೊಂಡು ಬರುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಇದೇ ಕಾರಣಕ್ಕೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.
ಪದ್ಮಶ್ರೀ ಅಲ್ಲದೆ, ನಾಡೋಜ ಪ್ರಶಸ್ತಿ, ಜನಪದ ಶ್ರೀ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರದ್ದಾಗಿತ್ತು. ಅವರ ಜೀವನಗಾಥೆ ಪಠ್ಯ ಪುಸ್ತಕದ ರೂಪದಲ್ಲಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ. ಇಂತಿಪ್ಪ ಕನ್ನಡದ ಹೆಮ್ಮೆಯ ಕಲಾವಿದೆ ಈಗ ಹಾಡು ನಿಲ್ಲಿಸಿದ್ದಾರೆ.