Publish Date: Fri, 29 Jun 2018 (18:33 IST)
Updated Date: Fri, 29 Jun 2018 (18:37 IST)
ನವಿಲು ಗರಿ ಮಾರಾಟ, ಕೋಳಿ, ಮೀನು ಮಾರಾಟ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಗೂಬೆ ಮಾರಾಟಕ್ಕೆ ಕೆಲವರು ಯತ್ನಿಸುತ್ತಿರುವ ಘಟನೆ ವರದಿಯಾಗಿದೆ.
ಅಂದಹಾಗೆ ಗಡಿ ಜಿಲ್ಲೆಯಾಗಿರುವ ಚಾಮರಾಜನಗರದಲ್ಲಿ ಈ ಘಟನೆ ನಡೆದಿದೆ. ಗುಂಡ್ಲುಪೇಟೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಸಿಕ್ಕಿಬಿದ್ದ ವ್ಯಕ್ತಿ ಗೂಬೆಯನ್ನು ಜನರಿಗೆ ಮಾರಾಟ ಮಾಡುತ್ತಿದ್ದ. ಗೂಬೆ ಮಾರಾಟದ ಹಿನ್ನೆಲೆಯಲ್ಲಿ ಬೇರಂಬಾಡಿ ಗ್ರಾಮದ ಮನು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಗೂಬೆ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸ್ ಠಾಣೆಗೆ ಲಭ್ಯವಾಗಿತ್ತು. ಹೀಗಾಗಿ ಮಾಹಿತಿ ಆಧರಿಸಿ ಗುಂಡ್ಲುಪೇಟೆ ಸಿಪಿಐ ಬಾಲಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಮನು ಸಿಕ್ಕಿ ಬಿದ್ದರೆ, ಮತ್ತೊಬ್ಬ ಆರೋಪಿ ವೆಂಕಟೇಶ್ ಪರಾರಿಯಾಗಿದ್ದಾನೆ. ಈ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.