Publish Date: Wed, 09 Oct 2024 (18:28 IST)
Updated Date: Wed, 09 Oct 2024 (18:32 IST)
ಬೆಂಗಳೂರು: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಲು ಅತಿಯಾದ ಆತ್ಮವಿಶ್ವಾಸವೇ ಕಾರಣ. ಹೈಕಮಾಂಡ್ ಸೋಲಿನ ಬಗ್ಗೆ ಪರಾಮರ್ಶನೆ ಮಾಡುತ್ತದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಸದಾಶಿವನಗರದ ನಿವಾಸದಲ್ಲಿ ಬುಧವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎನ್ನುವುದಕ್ಕೆ ನಿನ್ನೆಯ ಫಲಿತಾಂಶ ತೋರಿಸಿಕೊಟ್ಟಿದೆ. ಜಮ್ಮು, ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚನೆ ಮಾಡುತ್ತದೆ ಎಂದರು.
ಹರಿಯಾಣ ಫಲಿತಾಂಶ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳೇ ಬೇರೆ, ಬೇರೆ ಎಂದರು.
ಇನ್ನೂ ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಮುಡಾ ಹಗರಣ ಕಾರಣ ಎಂದಿರುವ ಮಾಜಿ ಸಭಾಪತಿ ಕೋಳಿವಾಡ ಅವರ ಹೇಳಿಕೆ ಪ್ರತಿಕ್ರಿಯಿಸಿ ಅವರು, ಕೋಳಿವಾಡ ಅವರ ಹೇಳಿಕೆಗೂ ಹರಿಯಾಣ ಸೋಲಿಗೂ ಸಂಬಂಧವಿಲ್ಲ. ಇದರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು.