Select Your Language

Notifications

webdunia
webdunia
webdunia
webdunia

12 ದೇಶಗಳಲ್ಲಿ ಕಂಡುಬಂದ ಹೊಸ ರೂಪಾಂತರಿ ಒಮಿಕ್ರೋನ್ ವೈರಸ್

12 ದೇಶಗಳಲ್ಲಿ ಕಂಡುಬಂದ ಹೊಸ ರೂಪಾಂತರಿ ಒಮಿಕ್ರೋನ್ ವೈರಸ್
bangalore , ಸೋಮವಾರ, 29 ನವೆಂಬರ್ 2021 (20:16 IST)
ಕೋವಿಡ್‌ ಹೊಸ ರೂಪಾಂತರಿ ಒಮಿಕ್ರೋನ್ ವೈರಾಣು ಸುಮಾರು 12 ದೇಶಗಳಲ್ಲಿ ಕಂಡು ಬಂದಿದೆ.
 
 ಕಳೆದ 12-13 ದಿನಗಳಲ್ಲಿ ದಕ್ಷಿಣಆಫ್ರಿಕಾ ಸೇರಿದಂತೆ ಹಲವು ದೇಶಗಳಿಂದ ಬಂದ ಪ್ರಯಾಣಿಕರ ಮೇಲೆ ನಿಗಾ ಇರಿಸಿ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರೋನ್​​​ ವೈರಾಣು ಹಿಂದೆ ನಾಲ್ಕು ದೇಶಗಳಲ್ಲಿ ಕಂಡು ಬಂದಿತ್ತು. ಈಗ ಒಟ್ಟು 12 ದೇಶಗಳಲ್ಲಿ ಪತ್ತೆಯಾಗಿದೆ. ದೇಶದಲ್ಲಿ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ ಎಂದರು.
 
ರಾಜ್ಯ ಸರ್ಕಾರ ಕೂಡ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ನಾಳೆ ಆರೋಗ್ಯ ಇಲಾಖೆಯಿಂದ ವಿಶೇಷ ಸಭೆ ನಡೆಯಲಿದ್ದು, ಎಲ್ಲಾ ಹಿರಿಯ ಅಧಿಕಾರಿಗಳು, ವೈದ್ಯರು, ತಾಂತ್ರಿಕ ಸಲಹಾ ಸಮಿತಿ ತಜ್ಞರು ಪಾಲ್ಗೊಳ್ಳಲಿದ್ದಾರೆ. ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಸರ್ಕಾರ ನೀಡುವ ಮಾರ್ಗಸೂಚಿ, ಅದರ ಪಾಲನೆ ಹೇಗಾಗಬೇಕು ಎಂಬುದರ ಬಗ್ಗೆ ಇಲ್ಲಿ ಚರ್ಚೆಯಾಗಲಿದೆ ಎಂದು ತಿಳಿಸಿದರು.
 
ಕೋವಿಡ್‌ನಿಂದ ಈಗಾಗಲೇ ಜನರು ನೊಂದಿದ್ದು, ಬಹಳ ನಷ್ಟ ಅನುಭವಿಸಿದ್ದಾರೆ. ಆದ್ದರಿಂದ ಜನರು ಆತಂಕಕ್ಕೆ ಒಳಗಾಗುವಂತೆ ಮಾಡಬಾರದು. ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳು ತಪ್ಪು ಸುದ್ದಿ ಹರಡಬಾರದು. 
 
ಲಾಕ್​​​ಡೌನ್ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪ ಇಲ್ಲ. ಹೀಗಾಗಿ ಆ ಬಗ್ಗೆ ಹೆದರಿಸುವ ಕೆಲಸ ಆಗಬಾರದು. ಆದರೆ ವೈರಾಣು ಕುರಿತು ಜಾಗೃತಿ ಕಾರ್ಯಗಳು ಹೆಚ್ಚಾಗಿ ನಡೆಯಬೇಕು. ಹೊಸ ವೈರಾಣು ಡೆಲ್ಟಾ ರೂಪಾಂತರಿಯಷ್ಟು ಅಪಾಯಕಾರಿ ಅಲ್ಲ ಎಂದು ಕೆಲ ತಜ್ಞರು ತಿಳಿಸಿದ್ದಾರೆ. 
 
ಆದರೆ ವೈರಾಣು ವರ್ತನೆ ಬಗ್ಗೆ ಜಿನೊಮಿಕ್ ಸೀಕ್ವೆನ್ಸಿಂಗ್ ಆದ ನಂತರ ನಿಖರ ಮಾಹಿತಿ ಲಭ್ಯವಾಗಲಿದೆ. ಡಿ.01 ರ ನಂತರ ಒಮಿಕ್ರೋನ್ ಅಧ್ಯಯನದ ವಿವರಗಳು ದೊರೆಯಲಿವೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಮಿಕ್ರಾನ್ ಆತಂಕ: ತೀವ್ರ ಕಟ್ಟೆಚ್ಚರ!