Select Your Language

Notifications

webdunia
webdunia
webdunia
webdunia

ಪ್ರತಿ ದಿನ 90 ಸಾವಿರಕ್ಕೂ ಅಧಿಕ ರೋಗಿಗಳಿಂದ ಆರೋಗ್ಯ ಸೇವೆಗಳಿಗಾಗಿ ಇ-ಸಂಜೀವಿನಿ

ಪ್ರತಿ ದಿನ 90 ಸಾವಿರಕ್ಕೂ ಅಧಿಕ ರೋಗಿಗಳಿಂದ ಆರೋಗ್ಯ ಸೇವೆಗಳಿಗಾಗಿ ಇ-ಸಂಜೀವಿನಿ
ನವದೆಹಲಿ , ಬುಧವಾರ, 22 ಸೆಪ್ಟಂಬರ್ 2021 (08:34 IST)
ನವದೆಹಲಿ, ಸೆ 22 : ಭಾರತ ಸರಕಾರದ ರಾಷ್ಟ್ರೀಯ ಟೆಲಿ ಮೆಡಿಸನ್ ಸೇವೆ ಇ-ಸಂಜೀವಿನಿ 1.2 ಕೋಟಿ (120 ಲಕ್ಷ) ಸಮಾಲೋಚನೆಗಳನ್ನು ಪೂರ್ಣಗೊಳಿಸುವ ಮೂಲಕ ದೇಶದ ಅತ್ಯಂತ ಜನಪ್ರಿಯ ಮತ್ತು ಅತಿ ದೊಡ್ಡ ಟೆಲಿಮೆಡಿಸಿನ್ ಸೇವೆಯಾಗಿ ಕ್ಷಿಪ್ರಗತಿಯಲ್ಲಿ ರೂಪುಗೊಂಡಿದೆ.
Photo Courtesy: Google

ಸದ್ಯ ಈ ರಾಷ್ಟ್ರೀಯ ಟೆಲಿ ಮೆಡಿಸನ್ ಸೇವೆಯನ್ನು ದೇಶಾದ್ಯಂತ ಪ್ರತಿದಿನ ಸುಮಾರು 90 ಸಾವಿರಕ್ಕೂ ಅಧಿಕ ರೋಗಿಗಳು ಸಂಪರ್ಕಿಸುತ್ತಿದ್ದು, ದೇಶಾದ್ಯಂತ ರೋಗಿಗಳು, ವೈದ್ಯರು ಮತ್ತು ವಿಶೇಷ ತಜ್ಞರು ಈ ವೇದಿಕೆಯನ್ನು ಬಳಸುತ್ತಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯ, ಇ-ಸಂಜೀವಿನಿಯನ್ನು ಎರಡು ವಿಧಾನಗಳ ಮೂಲಕ ಜಾರಿಗೊಳಿಸುತ್ತಿದೆ, ಅವುಗಳೆಂದರೆ ಇ-ಸಂಜೀವಿನಿ ಎಬಿ-ಎಚ್ ಡಬ್ಲ್ಯೂಸಿ (ವೈದ್ಯರಿಂದ ವೈದ್ಯರ ಟೆಲಿ ಮೆಡಿಸನ್ ಸೇವೆ), ಇದು ಹಬ್ ಮತ್ತು ಸ್ಪೋಕ್ ಮಾದರಿಯಾದರೆ, ಮತ್ತೊಂದು ಇ-ಸಂಜೀವಿನಿ ಒಪಿಡಿ (ರೋಗಿಗಳಿಂದ ವೈದ್ಯರ ಟೆಲಿಮೆಡಿಸಿನ್ ಸಂಪರ್ಕ ವೇದಿಕೆ), ಇದರಲ್ಲಿ ನಾಗರಿಕರಿಗೆ ಹೊರರೋಗಿಗಳ ಸೇವೆಯು ಅವರ ಮನೆಗಳಿಗೆ ಸೀಮಿತವಾಗಿರುತ್ತದೆ.
ಇ-ಸಂಜೀವಿನಿ ಎಬಿ-ಎಚ್ ಡಬ್ಲೂಸಿ ಸುಮಾರು 67,00,000 ಸಮಾಲೋಚನೆಗಳನ್ನು ಪೂರ್ಣಗೊಳಿಸಿದೆ. ಇದನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ಸ್ಥಾಪಿಸಲಾಗಿರುವ ಎಲ್ಲ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. 2019ರ ನವೆಂಬರ್ ನಲ್ಲಿ ಈ ಸೇವೆ ಆರಂಭವಾಯಿತು. ಆಂಧ್ರಪ್ರದೇಶ ಮೊದಲು ಇ-ಸಂಜೀವಿನಿ ಎಬಿ-ಎಚ್ ಡಬ್ಲೂಸಿ ಸೇವೆ ಜಾರಿಗೊಳಿಸಿತು. ಇದು ಆರಂಭವಾದ ನಂತರ ನಾನಾ ರಾಜ್ಯಗಳಲ್ಲಿ ಸುಮಾರು 2ಸಾವಿರ ಹಬ್ ಮತ್ತು 28ಸಾವಿರ ಸ್ಪೋಕ್ ಮಾದರಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಕೋವಿಡೇತರ ರೋಗಿಗಳಿಗೂ ಸೇವೆ:
ಇ-ಸಂಜೀವಿನಿ ಒಪಿಡಿ ಟೆಲಿಮೆಡಿಸಿನ್ ಮೂಲಕ ನಾಗರಿಕರು ಕೋವಿಡೇತರ ಮತ್ತು ಕೋವಿಡ್-19 ಸಂಬಂಧಿ ಹೊರರೋಗಿಗಳ ಆರೋಗ್ಯ ಸೇವೆಗಳನ್ನೂ ಸಹ ಪಡೆಯಬಹುದಾಗಿದೆ. ದೇಶದಲ್ಲಿ ಮೊದಲ ಲಾಕೌ ಡೌನ್ ವೇಳೆ ಎಲ್ಲ ಒಪಿಡಿಗಳು ಮುಚ್ಚಿದ ಸಂದರ್ಭದಲ್ಲಿ 2020ರ ಏಪ್ರಿಲ್ 13ರಂದು ಈ ಸೇವೆಗೆ ಚಾಲನೆ ನೀಡಲಾಗಿತ್ತು. ಈವರೆಗೆ ಸುಮಾರು 51,00,000 ರೋಗಿಗಳು ಇಸಂಜೀವಿನಿ ಒಪಿಡಿ ಮೂಲಕ ಸೇವೆ ಪಡೆದಿದ್ದಾರೆ, ಅದು 430 ಆನ್ ಲೈನ್ ಒಪಿಡಿಗಳನ್ನು ಹೊಂದಿದೆ, ಅದರಲ್ಲಿ ಸಾಮಾನ್ಯ ಒಪಿಡಿ ಮತ್ತು ವಿಶೇಷ ಒಪಿಡಿಗಳೂ ಸಹ ಸೇರಿವೆ.
ಪ್ರತಿಷ್ಠಿತ ತೃತಿಯ ಹಂತದ ವೈದ್ಯಕೀಯ ಸಂಸ್ಥೆಗಳಾದ ಬಠಿಂಡಾದ ಏಮ್ಸ್ (ಪಂಜಾಬ್), ಬಿಬಿನಗರ್ (ತೆಲಂಗಣ), ಕಲ್ಯಾಣಿ (ಪಶ್ಚಿಮ ಬಂಗಾಳ), ರಿಶಿಕೇಷ್ (ಉತ್ತರಾಖಂಡ್ ), ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜು ಲಕ್ನೋ, (ಉತ್ತರ ಪ್ರದೇಶ) ಇತ್ಯಾದಿ ಕೂಡ ಇ-ಸಂಜೀವಿನಿ ಒಪಿಡಿ ಮೂಲಕ ಹೊರರೋಗಿಗಳಿಗೆ ಆರೋಗ್ಯ ಸೇವೆಗಳನ್ನು ನೀಡುತ್ತಿವೆ.
ಭಾರತ ಸರ್ಕಾರದ ಇ-ಸಂಜೀವಿನಿ ರಾಷ್ಟ್ರೀಯ ಟೆಲಿ ಮೆಡಿಸನ್ ಸೇವೆ ನಗರ ಮತ್ತು ಗ್ರಾಮೀಣ ಭಾರತದ ನಡುವಿನ ಡಿಜಿಟಲ್ ಅಂತರ ನಿವಾರಣೆಗೆ ಸಹಕಾರಿಯಾಗಿದೆ. ಅಲ್ಲದೆ ಇದು ದ್ವಿತೀಯ ಹಾಗೂ ತೃತೀಯ ಹಂತದ ಆಸ್ಪತ್ರೆಗಳಲ್ಲಿನ ವೈದ್ಯರು ಮತ್ತು ವಿಶೇಷ ತಜ್ಞರ ಕೊರತೆಯನ್ನು ನೀಗಿಸುತ್ತಿದೆ. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಭಾಗವಾಗಿ ಇ-ಸಂಜೀವಿನಿ ದೇಶದ ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ.
ಇದು ದೇಶೀಯ ಟೆಲಿಮೆಡಿಸಿನ್ ತಂತ್ರಜ್ಞಾನವಾಗಿದ್ದು, ಇದನ್ನು ಮೊಹಾಲಿಯ ಸೆಂಟರ್ ಫಾರ್ ಡೆವಲಪ್ ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿ-ಡಾಕ್) ಅಭಿವೃದ್ಧಿಪಡಿಸಿದೆ. ಮೊಹಾಲಿಯಲ್ಲಿ ಸಿ-ಡಾಕ್ ತಂಡ ಮೊದಲಿನಿಂದ ಕೊನೆಯವರೆಗೆ ಎಲ್ಲ ಸೇವೆಗಳನ್ನು ಒದಗಿಸುತ್ತಿದೆ. ಟೆಲಿಮೆಡಿಸಿನ್ ಸೇವೆಯ ಉಪಯುಕ್ತ ಬಳಕೆಯನ್ನು ಪರಿಗಣಿಸಿ ಮತ್ತು ಕೋವಿಡ್-19 ಸೋಂಕಿನ ಮತ್ತೊಂದು ಅಲೆಯ ಸಂಭವನೀಯತೆ ಪರಿಗಣಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರತಿದಿನ 500,000 ಸಮಾಲೋಚನೆಗಳನ್ನು ನಡೆಸಲು ಸಾಮರ್ಥ್ಯವನ್ನು ವೃದ್ಧಿಸಿದೆ.
10 ಪ್ರಮುಖ ರಾಜ್ಯಗಳು ಇ-ಸಂಜೀವಿನಿ ಸೇವೆ ಪಡೆಯುವಲ್ಲಿ ಮುಂಚೂಣಿಯಲ್ಲಿವೆ. ಅವುಗಳೆಂದರೆ ಆಂಧ್ರಪ್ರದೇಶ (37,04,258), ಕರ್ನಾಟಕ (22,57,994), ತಮಿಳುನಾಡು (15,62,156), ಉತ್ತರ ಪ್ರದೇಶ (13,28,889), ಗುಜರಾತ್ (4,60,326), ಮಧ್ಯಪ್ರದೇಶ (4,28,544), ಬಿಹಾರ (4,04,345), ಮಹಾರಾಷ್ಟ್ರ (3,78,912), ಪಶ್ಚಿಮ ಬಂಗಾಳ (2,74,344) ಮತ್ತು ಕೇರಳ (2,60,654).(ಆರೋಗ್ಯ ಇಲಾಖೆ ಪ್ರಕಟಣೆ)


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಕ್ಕೆ ಕಾಲಿಟ್ಟಿದೆ ಹೊಸ ರೀತಿಯ ಜ್ವರ; 171 ಮಕ್ಕಳು ಆಸ್ಪತ್ರೆಗೆ ದಾಖಲು..