Select Your Language

Notifications

webdunia
webdunia
webdunia
webdunia

ಪ್ರಧಾನಿ ಹುಟ್ಟು ಹಬ್ಬಕ್ಕೆ 30 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡುವ ಗುರಿ

ಪ್ರಧಾನಿ ಹುಟ್ಟು ಹಬ್ಬಕ್ಕೆ 30 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡುವ ಗುರಿ
ಬೆಂಗಳೂರು , ಬುಧವಾರ, 15 ಸೆಪ್ಟಂಬರ್ 2021 (07:24 IST)
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯರವ ಹುಟ್ಟು ಹಬ್ಬದಂದು ರಾಜ್ಯ ಆರೋಗ್ಯ ಇಲಾಖೆ ಲಸಿಕೆ ಮೆಗಾ ಮೇಳ ಹಮ್ಮಿಕೊಂಡಿದ್ದು, ಆ ದಿನ ಬರೋಬ್ಬರಿ 30 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದೆ.
Photo Courtesy: Google

ಅದರಲ್ಲೂ ಇಲ್ಲಿಯವರೆಗೂ ಲಸಿಕೆಯಿಂದ ದೂರ ಉಳಿದ ವರ್ಗವನ್ನು ಗುರಿಯಾಗಿಟ್ಟುಕೊಂಡು ಯೋಜನೆ ರೂಪಿಸಲಾಗಿದ್ದು, ರಾಜ್ಯದಲ್ಲಿ ಈ ವರ್ಗವೇ ಒಂದೂವರೆ ಕೋಟಿಯಷ್ಟಿದೆ. ಅಂದುಕೊಂಡಂತೆ ಈ ಗುರಿ ತಲುಪಿದರೆ ಒಂದೇ ದಿನದಲ್ಲಿ ದೇಶದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.
ಶುಕ್ರವಾರ (ಸೆ.17) ಪ್ರಧಾನಿ ಹುಟ್ಟುಹಬ್ಬದ ಹಿನ್ನೆಲೆ ಬಿಜೆಪಿ ವತಿಯಿಂದ ಸೇವಾ ಮತ್ತು ಸಮರ್ಪಣಾ ಅಭಿಯಾನ ನಡೆಸಲಾಗುತ್ತಿದೆ. ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದ್ದು, ಆ ದಿನದಂದು ಲಸಿಕೆ ಅಭಿಯಾನವನ್ನು ದೊಡ್ಡಪ್ರಮಾಣದಲ್ಲಿ ಆಯೋಜಿಸಿ ಅತಿ ಹೆಚ್ಚು ಮಂದಿಗೆ ಲಸಿಕೆ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಸಾಮಾನ್ಯ ದಿನಗಳಲ್ಲಿ 3-4 ಲಕ್ಷ ಮಂದಿಗೆ ಲಸಿಕೆ ನೀಡಲಾಗುತ್ತಿದ್ದು, ಈ ಹಿಂದಿನ ಮೇಳಗಳಲ್ಲಿ 12 ಲಕ್ಷ ಮಂದಿಗೆ ಲಸಿಕೆ ನೀಡಲಾಗಿತ್ತು. ಶುಕ್ರವಾರ ಸಾಮಾನ್ಯ ದಿನಗಳಿಗಿಂತ ಹತ್ತು ಪಟ್ಟು ಅಧಿಕ ಮಂದಿಗೆ ಲಸಿಕೆ ನೀಡಲು ಗುರಿ ಹೊಂದಲಾಗಿದೆ. ಇದಕ್ಕಾಗಿ ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಸಿದ್ಧತೆ ಆರಂಭಿಸಿದ್ದು, 10 ಸಾವಿರ ಲಸಿಕೆ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಇದಕ್ಕಾಗಿ ಅಗತ್ಯ ಸಿಬ್ಬಂದಿ, ಕೇಂದ್ರಗಳು, ಲಸಿಕೆಯನ್ನು ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ.
ಮಂಗಳವಾರ ಆರೋಗ್ಯ ಇಲಾಖೆ ಮುಖ್ಯಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ನಿರ್ದಿಷ್ಟ ಗುರಿ ನೀಡಿ ಸ್ಥಳೀಯ ಮಟ್ಟದಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳು ಸೂಚಿಸಿದ್ದಾರೆ. ಜತೆಗೆ ವಿವಿಧ ಇಲಾಖೆಗಳ ಮುಖ್ಯಸ್ಥಗಳ ಸಭೆ ನಡೆಸಿ ಲಸಿಕೆಗೆ ಹೆಚ್ಚು ಜನರ ಕರೆತರಲು, ಸಿಬ್ಬಂದಿ ನೆರವಿಗೆ, ಲಸಿಕೆ ಕೇಂದ್ರ ತೆರೆಯಲು ಸ್ಥಳಾವಕಾಶ ನೀಡುವಂತೆ ತಿಳಿಸಲಾಗಿದೆ. ಇದರೊಟ್ಟಿಗೆ ಖಾಸಗಿ ಆಸ್ಪತ್ರೆ ಒಕ್ಕೂಟ ಮತ್ತು ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಜತೆಗೆ ಸಭೆ ನಡೆಸಿ ಆ ದಿನ ಹೆಚ್ಚು ಲಸಿಕೆ ದಾಸ್ತಾನು ಇಟ್ಟು, ಹೆಚ್ಚು ಸಮಯ ಕಾರ್ಯನಿರ್ವಹಿಸಿ ಲಸಿಕೆ ನೀಡಿ ಮೆಗಾ ಅಭಿಯಾನ ಯಶಸ್ಸಿಗೆ ಅಗತ್ಯ ನೆರವು ನೀಡುವಂತೆ ಕೋರಲಾಗಿದೆ.
ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿ ಆಹ್ವಾನ:
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಲಸಿಕೆಗೆ ಅರ್ಹತೆ ಪಡೆದವರ ಸಂಖ್ಯೆ 4.95 ಕೋಟಿ ಇದ್ದು, ಮಂಗಳವಾರದ ಅಂತ್ಯಕ್ಕೆ 3.5 ಕೋಟಿ ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ. (ಈ ಪೈಕಿ 1.26 ಕೋಟಿ ಮಂದಿ ಎರಡೂ ಡೋಸ್) 1.5 ಕೋಟಿಯಷ್ಟು ಮಂದಿ ಲಸಿಕೆಯಿಂದ ದೂರ ಉಳಿದಿದ್ದಾರೆ. ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಆಹಾರ ಮತ್ತ ನಾಗರಿಕ ಸರಬರಾಜು ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಯ ಸಿಬ್ಬಂದಿ ಮತ್ತು ದತ್ತಾಂಶ ನೆರವು ಪಡೆದು ಈವರೆಗೂ ಒಂದು ಡೋಸ್ ಲಸಿಕೆಯನ್ನು ಪಡೆಯದೇ ಇರುವಂತಹವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವರಿಗೆ ಕರೆ ಮಾಡಿ, ಮನೆಗಳಿಗೆ ಭೇಟಿ ನೀಡಿ ಶುಕ್ರವಾರ ಬಂದು ಲಸಿಕೆ ಪಡೆಯುವಂತೆ ತಿಳಿಸಲಾಗುತ್ತಿದೆ. ಲಸಿಕಾ ಕೇಂದ್ರಕ್ಕೆ ಆಗಮಿಸಲು ಸಾಧ್ಯವಾಗದವಿಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ.
ಅಗತ್ಯ ದಾಸ್ತಾನು ಇದೆ:
ಮಂಗಳವಾರದ ಅಂತ್ಯಕ್ಕೆ ಜಿಲ್ಲಾ ಲಸಿಕೆ ಸಂಗ್ರದ ಕೇಂದ್ರಗಳಲ್ಲಿ ಒಟ್ಟಾರೆ 21 ಲಕ್ಷ ಡೋಸ್ ಲಸಿಕೆ ದಾಸ್ತಾನು ಇದೆ. ಬುಧವಾರ ಐದು ಲಕ್ಷ ಡೋಸ್, ಗುರುವಾರ 10 ಲಕ್ಷ ಡೋಸ್ ದಾಸ್ತಾನು ಬರಲಿದೆ. ಹೀಗಾಗಿ ಲಸಿಕೆ ಕೊರತೆ ಉಂಟಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಹುಟ್ಟು ಹಬ್ಬದ ಹಿನ್ನೆಲೆ ಶುಕ್ರವಾರ ರಾಜ್ಯಾದ್ಯಂತ ಕೋವಿಡ್ ಲಸಿಕೆ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಸಚಿವರುಗಳು ಆಯಾ ಜಿಲ್ಲೆಗಳಲ್ಲಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಕಲಬುರಗಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುತ್ತೇನೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.


Share this Story:

Follow Webdunia kannada

ಮುಂದಿನ ಸುದ್ದಿ

ಕೆವೈಸಿ ನೆಪದಲ್ಲಿ ವಂಚನೆ: ಸಾರ್ವಜನಿಕರಿಗೆ RBI ನಿಂದ ಮಹತ್ವದ ಸೂಚನೆ