Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮಹಾತ್ಮರನ್ನು ಕೊಂದದ್ದು ಅಂದು ಮಾತ್ರವಲ್ಲ

webdunia
ಭಾನುವಾರ, 30 ಜನವರಿ 2022 (20:46 IST)
ಮಹಾತ್ಮರನ್ನು ಈ ಲೋಕ ಕೊಲ್ಲುತ್ತಲೇ ಇರುತ್ತದೆ.  ಜೀವ ಎಂಬುದು ಹೇಗೋ ಹೋಗಿಯೇ ತೀರುತ್ತೆ. ಬದುಕಿದಷ್ಟು ದಿನವೂ ಸಾಯುತ್ತಲೇ ಇರುತ್ತವೆ. ನಾವೆಲ್ಲ ಸಾಯತ್ತಲೇ ಇರುವ ಜೀವಿಗಳು.  ಜೀವವಿರುವಾಗ ಬದುಕಿ ಹೋದವರು ಬೆರಳೆಣಿಕೆಯಷ್ಟು ಮಂದಿ.  ಅಂತಹ ಮಂದಿಯನ್ನು ಸತ್ತ ಮನಸ್ಸುಗಳು ಕೊಲ್ಲುತ್ತವೆ.  ಅವರು ಸತ್ತ ಎಷ್ಟೋ  ಯುಗಗಳ ನಂತರವೂ ಕೊಲ್ಲುತ್ತಲೇ ಹೋಗುತ್ತವೆ. 
 
ತಾವು ನಂಬಿರವುದೇ ಶ್ರೇಷ್ಠ ಎಂದು ನಂಬಿರುವ ಜನ ಕೆಲವರು ಕ್ರಿಯಾಶೀಲರಾಗೂ ಕಾಣುತ್ತಾರೆ. ಕ್ರಿಯಾಶೀಲರಾಗಿ ಲೋಕಕ್ಕೆ ಕಾಣುವದು, ಜನಪ್ರಿಯರಾಗುವುದು, ಸಿದ್ಧಾಂತಗಳ ಪ್ರತಿಪಾದಿಸುವುದು ಇದೆಲ್ಲ ಬದುಕುವ ಲಕ್ಷಣಗಳೇನೂ ಅಲ್ಲ.   ಮಹಾತ್ಮರೆಂದರೆ ತನ್ನೊಳಗೆ ತನ್ನ ಪರಿಷ್ಕರಣೆ.  ಅದು ಪರಿಪೂರ್ಣತೆಯೂ ಆಗಿರಬೇಕಿಲ್ಲ. ಅದೊಂದು ಪಯಣ.‍ ಅದನ್ನು ಕೊಲ್ಲುವುದಸಾಧ್ಯ. ಕೊಲ್ಲುವುದು ಜಾಢ್ಯ. "ಕೊಂದು ತಮ್ಮ ಕೊಂದುಕೊಂಡವರು" ಬದುಕುತ್ತಿದ್ದೇವೆ ಎಂದು ಭ್ರಮಿಸಿದವರಾರೂ ಬದುಕಿರಲಿಲ್ಲ, ಬದುಕುವುದೂ ಇಲ್ಲ, ಬದುಕಿದ್ದಿರಲಿಕ್ಕೆ ಸಾಧ್ಯವೂ ಇಲ್ಲ.   ಬದುಕೆಂಬುದು ಮಹಾತ್ಮರಿಗೆ ಮಾತ್ರವೇ ಸಾಧ್ಯ. ಅವರು ಜೀವಂತ.
“ರಕ್ತ ಮಾಂಸಗಳು ತುಂಬಿದ ಇಂಥ ಒಬ್ಬ ಮನುಷ್ಯ  ಈ ಲೋಕದಲ್ಲಿ ನಡೆದಾಡಿದ್ದ ಎಂದರೆ ಮುಂಬರುವ ಜನಾಂಗಗಳು ಅಚ್ಚರಿ ಪಡುತ್ತವೆ” ಎಂದು ಆಲ್ಬರ್ಟ್ ಐನ್ಸ್ಟೈನ್ ಅವರು ಮಹಾತ್ಮರನ್ನು ವರ್ಣಿಸಿದ ಮಾತುಗಳು ನಮಗೆ ಗೋಚರಿಸುತ್ತವೆ.  ನಮಗೆ ಆಲ್ಬರ್ಟ್ ಐನ್ ಸ್ಟೈನ್ ಹೆಸರು ಗೊತ್ತು.  ಅವರು ವಿಜ್ಞಾನಿ ಎಂದು ಗೊತ್ತು.  ಆದರೆ ನಮ್ಮಲ್ಲಿ ಬಹುತೇಕರಿಗೆ ಅವರ ವಿಜ್ಞಾನ ತತ್ವ ಗೊತ್ತಿಲ್ಲ.  ಅವರು ನಾವು ಹೇಳುವ ದೇವರ ಅಸ್ತಿತ್ವವನ್ನು ನಂಬುತ್ತಿರಲಿಲ್ಲ ಎಂಬುದು ಗೊತ್ತು.  ಆದರೆ ಅವರು ಈ ಮಹಾತ್ಮನ ಮಹತ್ವವನ್ನು ಸುಸ್ಪಷ್ಟವಾಗಿ ಗುರುತಿಸಿದ್ದರು.  ಐನ್ ಸ್ಟೈನ್ ಒಬ್ಬ ಮಹಾನ್ ವಿಜ್ಞಾನಿ.  ಅವರಿಗೆ ಸತ್ಯ ಎಂಬುದು  ಗೊತ್ತಿತ್ತು.  ಹಾಗಾಗಿ ಅವರಿಗೆ ಮತ್ತೊಬ್ಬ ವಿಜ್ಞಾನಿಯ ಬಗ್ಗೆ ಅರ್ಥವಾಗುತ್ತಿತ್ತು.  ಗಾಂಧೀಜಿ ಸತ್ಯ ಸಂಶೋಧನೆಯ ವಿಚಾರದಲ್ಲಿ ವಿಜ್ಞಾನಿಯ ನಿಷ್ಠೆಯಲ್ಲಿ ತಪಸ್ಸನ್ನಾಚರಿಸಿದವರು.  ಹೀಗೆಂದ ಮಾತ್ರಕ್ಕೆ ನಮಗೆ ಗಾಂಧೀಜಿ ಗೊತ್ತು ಎಂದು ಹೇಳುವಂತಿಲ್ಲ.  “ನಮಗೆ ಗಾಂಧೀಜಿ ಅವರ ಹೆಸರು ಗೊತ್ತು.  ಅವರು ಮಹಾತ್ಮರು ಎಂದು  ಎಲ್ಲರೂ ಹೇಳುವುದು ಗೊತ್ತು.  ನಮಗೆ ಅಷ್ಟೊಂದು ದೇವರುಗಳ ಹೆಸರುಗಳು ಗೊತ್ತಿರುವ ಹಾಗೆ.”!
 
“Be the change you want to see in others” ಎಂಬ ಮಹಾತ್ಮರ ನುಡಿಯನ್ನು ಕನ್ನಡದಲ್ಲಿ ಮೂಡಿಸುವ ಆಸೆ ಆಗುತ್ತದೆ.  ಆದರೆ ಅದೇಕೋ ಪ್ರತೀ ಬಾರೀ ಸೋತ ಅನುಭವವಾಗುತ್ತದೆ.  ನಾವು ಪದಗಳ ಮೋಹದಲ್ಲಿ ಸಿಲುಕಿದಾಗ ನಮ್ಮ ಆಂತರ್ಯದ ಬದಲಾವಣೆ ಆಗುವುದಾದರೂ ಹೇಗೆ.  ಬದಲಾವಣೆ ನಾನಾಗಬೇಕು.  ಮತ್ತೆ ಅದೇ ಪ್ರಶ್ನೆ ನಾನು ಅಂದರೆ.  ಬಹುಶಃ ನನ್ನಲ್ಲಿ ‘ನಾನು’ ಎಂಬುದಿಲ್ಲದ ಒಂದು ಬದಲಾವಣೆಯನ್ನು ಆಗಗೊಡಬೇಕು.   ಸ್ವಾಮಿ ವಿವೇಕಾನಂದರು ಹೇಳುವ ಹಾಗೆ “ನೀನು ನಿನ್ನಲ್ಲಿ ನಿಶ್ಚಿಂತನಾಗಿ ವಿರಮಿಸು.  ಮಾಡುವುದೆಲ್ಲಾ ಆ ಪರಮಾತ್ಮನಿಗೆ ಸೇರಿದ್ದು”.  ಆದರೆ ಇಲ್ಲಿ ಮುಖ್ಯವಾದದ್ದು ಅವರು ‘ನೀನು’ ಎಂದು ಸಂಬೋಧಿಸುತ್ತಿರುವ ‘ನಾನು’ವನ್ನು ಅರ್ಥೈಸುವುದು.
ನಮಗೆ ಬದುಕಿನಲ್ಲಿ ಅತ್ಯಂತ ಕಷ್ಟವಾದದ್ದು ನಮ್ಮನ್ನು ನಾವು ಅವಲೋಕಿಸಿಕೊಳ್ಳುವುದು.  ಉದಾಹರಣೆಗೆ ಒಂದು ಪುಟ್ಟ ಸಂಗತಿಯನ್ನ್ನು ನಮಗೆ ನಾವೇ ಅವಲೋಕಿಸಿಕೊಂಡು ಹೇಳುವುದಾದರೆ,   ನಾವೇನು ಖರ್ಚು ಮಾಡುತ್ತಿದ್ದೇವೆ ಎಂದು ಬರೆಯಲು ಪ್ರಯತ್ನಿಸಿದವರೆಲ್ಲಾ ಅದನ್ನು ಬರೆಯಲಿಕ್ಕೆ ಪ್ರಾರಂಭಿಸಿದ ಒಂದೆರಡು ದಿನದಲ್ಲಿ ಅದರ ಬಗ್ಗೆ ತಲೆ ಕೆಟ್ಟು ಹೋಗಿ, ಕೈ ಬಿಟ್ಟು ಬಿಡುತ್ತೇವೆ.  ನಾವು ನಮ್ಮ ಬಗ್ಗೆ ಡೈರಿ ಬರೆಯಬೇಕು ಎಂದು ಹೋದಾಗಲೆಲ್ಲಾ ಅದು ನಾವು ಓದಿದ ಯಾವುದೋ ಶೈಲಿಯ ಹಾದಿ ಹಿಡಿದು ಸತ್ಯಬಿಟ್ಟು ಉಳಿದೆಲ್ಲವೂ ಆಗತೊಡಗಿ ಯಾವುದೋ ಅರ್ಥವಿಲ್ಲದ ಕಥೆ ಓದಿದ ಅನುಭವವಾಗಿ ಆ ಪ್ರಯತ್ನ ತಣ್ಣಗೆ ನಿಂತು ಹೋಗಿ ನಮ್ಮ ಡೈರಿಯ ಬಹುತೇಕ ಪುಟಗಳು ಖಾಲಿಯಾಗಿ ಉಳಿದುಬಿಡುತ್ತವೆ. “ಸರಳತೆ ಎಂಬ ಮುಕ್ತತೆ ತುಂಬಾ ಮುದವಾದದ್ದು. ಆದರೆ ಸರಳತೆ ಎಂಬ ಸಾಮಾನ್ಯತೆಯಿಂದ ನಾವು ಬಹುದೂರ ಸಾಗಿಬಿಟ್ಟಿದ್ದೇವೆ.  ಅದರ ಬಳಿ ಉಳಿದವರು ಮಾತ್ರವೇ ಮಹಾತ್ಮರು.  ಮಿಕ್ಕವರೆಲ್ಲಾ ಬರೀ ಉಳಿದವರು”.  ಗಾಂಧೀಜಿಯವರಿಗೆ  ತಮ್ಮ ಬದುಕನ್ನೇ ಸತ್ಯಾನ್ವೇಷಣೆ ಮಾಡಿಕೊಳ್ಳಲು ಸಾಧ್ಯವಾಗಿದ್ದರಿಂದಲೇ ಅವರು ಮಹಾತ್ಮರಾಗುವುದು ಸಾಧ್ಯವಾಯಿತು. 
ಮಹಾತ್ಮರ ಸಾಧನೆಯಿರುವುದು ಅವರು ವ್ಯವಸ್ಥೆಗಳ ಒಡನೆ ಮಾಡಿದ ಹೋರಾಟದಲ್ಲಲ್ಲ.  ಅವರು ತಮ್ಮನ್ನು ತಾವು ಕಂಡುಕೊಳ್ಳಲು ನಡೆಸಿದ  ಪ್ರಯತ್ನಗಳಲ್ಲಿ.   ತಮ್ಮ ತಪ್ಪುಗಳನ್ನು ಮುಕ್ತವಾಗಿರಿಸಿಕೊಳ್ಳಲು ಅವರಿಗೆ ಎಂದೂ ಮುಜುಗರವೆನಿಸಲಿಲ್ಲ.  ಅದರ ಪರಿಣಾಮಗಳನ್ನು ಎದುರಿಸಲಿಕ್ಕೆ ಅವರು ಸರ್ವದಾ ಸಿದ್ಧರಿದ್ದರು.  ಒಂದೆಡೆ ಅವರು ಹೇಳಿದ  ಮಾತೊಂದು  ನೆನಪಾಗುತ್ತದೆ.  “ಕ್ಷಮಿಸುವವನೇ ಧೀರ”.  ಕ್ಷಮಿಸುವವ ಹೇಗೆ ಧೀರನಾಗುತ್ತಾನೆ.  ನಮ್ಮನ್ನು ನಾವು ಅರ್ಥ ಮಾಡಿಕೊಂಡಾಗ ಇತರರ ತಪ್ಪು ನಮಗೆ ದೊಡ್ಡದೆನಿಸುವುದಿಲ್ಲ.  ಇತರರು ತಪ್ಪು ಮಾಡಿದಾಗ ಕೂಡಾ ಅದರಿಂದ ನಾವು ಕಲಿಯುತ್ತಾ ಹೋಗುತ್ತೇವೆ.  ಗಾಂಧಿ ಎಂಬ ವ್ಯಕ್ತಿ ಗಾಂಧೀಜಿ ಆಗಿದ್ದು, ಗಾಂಧೀಜಿ ಎಂಬ ಹಿರಿಯರು ಮಾಹಾತ್ಮರಾಗಿ ಏರಿದ ಮೆಟ್ಟಿಲುಗಳು ಇಲ್ಲಿವೆ ಎನಿಸುತ್ತದೆ.
ಗಾಂಧೀಜಿ ಅವರ ಕಾರ್ಮಿಕ ಪರ ಹೋರಾಟದ ಒಂದು ಘಟನೆ ನನ್ನ ಮನಸ್ಸನ್ನು ತೀವ್ರವಾಗಿ ತಟ್ಟಿದೆ.  ಅಹಮದಾಬಾದಿನ ಗಿರಣಿಯ ಕಾರ್ಮಿಕರ ಮೂಲಭೂತ ಅವಶ್ಯಕತೆಗಳ ಬೇಡಿಕೆಯ ಹೋರಾಟಕ್ಕೆ ಗಾಧೀಜಿ ಮುಂದಾಳತ್ವ ವಹಿಸಲು ಒಪ್ಪಿದರು.  ಕಾರ್ಮಿಕರು ಮುಷ್ಕರ ಹೂಡಿ ಕೆಲಸವನ್ನೂ ಬಹಿಷ್ಕರಿಸಿದರು.  ಏನೇನೋ ಉಪಯೋಗ ಕಾಣಲಿಲ್ಲ.  ಆಡಳಿತ ವರ್ಗ ಕೆಲವೊಂದು ದುರ್ಬಲ ಮನಸ್ಸಿನ ಕಾರ್ಮಿಕರನ್ನು ಪುಸಲಾಯಿಸಿ ಕಾರ್ಮಿಕ ವರ್ಗದಲ್ಲಿ ಒಡಕು ಮೂಡಿಸಲು ಯತ್ನಿಸಿತು.  ಆಗ ಗಾಂಧೀಜಿ ಆಡಳಿತ ವರ್ಗವನ್ನು ದೂಷಿಸಲಿಲ್ಲ.  ಒಡೆದ ಕಾರ್ಮಿಕರನ್ನೂ ದೂಷಿಸ ಹೋಗಲಿಲ್ಲ.  ಕಾರ್ಮಿಕರನ್ನು ಉದ್ದೇಶಿಸಿ  “ನೀವೆಲ್ಲಾ ಒಟ್ಟಾಗುವವರೆಗೆ ನಾನು ಅಮರಣಾಂತ ಉಪವಾಸ ಮಾಡುತ್ತೇನೆ” ಎಂದು ಹೇಳಿ ಉಪವಾಸ ಕುಳಿತುಬಿಟ್ಟರು.  ಒಂದೆರಡು ದಿನದಲ್ಲೇ ಕಾರ್ಮಿಕರೆಲ್ಲಾ ಮೂಕವಾದರು.  ಆ ಮೂಕತನದಲ್ಲಿ ಅವರೆಲ್ಲಾ ತಮ್ಮಲ್ಲಿನ ತಮವನ್ನು ಕಳೆದುಕೊಂಡು ಒಂದಾಗಿ ಹೋದರು.  ಅಹಮದಾಬಾದಿನ ಗಿರಣಿಯ ಮಾಲೀಕರು, ಗಾಂಧೀಜಿಯವರ ಬಳಿ ಬಂದು ಮಹಾತ್ಮರೇ ನಿಮ್ಮ ಕಾರ್ಮಿಕರ ಪರವಾಗಿನ ಎಲ್ಲಾ ಬೇಡಿಕೆಗಳನ್ನೂ  ನಾವು ಭೇಷರತ್ತಾಗಿ ಒಪ್ಪಿದ್ದೇವೆ, ದಯವಿಟ್ಟು ನಿಮ್ಮ ಉಪವಾಸ ನಿಲ್ಲಿಸಿ  ಎಂದು ಮಹಾತ್ಮರಿಗೆ ಶರಣಾದರು. 
ಗಾಂಧೀಜಿಯವರ ಬ್ರಿಟಿಷರ ವಿರುದ್ಧದ ಹೋರಾಟವನ್ನೇ ಗಮನಿಸೋಣ.  ಅವರು ವ್ಯಕ್ತಿಗತವಾಗಿ ಮಾಡಿದ ಟೀಕೆಗಳು ಯಾವ ಗ್ರಂಥಗಳನ್ನು ಜಾಲಾಡಿದರೂ ಸಿಗಲಾರವೇನೋ.  ಅವರನ್ನು ಕೋರ್ಟಿನಲ್ಲಿ ಕಟಕಟೆಯಲ್ಲಿ ನಿಲ್ಲಿಸಿದಾಗ ಹಲವಾರು  ಬ್ರಿಟಿಷ್ ನ್ಯಾಯಾದೀಶರು ತಮ್ಮ ಸ್ಥಾನದಿಂದ ಎದ್ದು ಗೌರವ ಸಲ್ಲಿಸುತ್ತಿದ್ದರು.   ಅವರನ್ನು ಬಂಧಿಸಿದ್ದ ಹಲವಾರು ಜೈಲರುಗಳು ನಮ್ಮ ಬಳಿ ಒಬ್ಬ ಮಹಾತ್ಮನಿದ್ದಾನೆ ಎಂಬ ಪೂಜ್ಯಭಾವ ತಳೆದಿದ್ದರು.  ಬ್ರಿಟಿಷ್ ಜನಾಂಗದ ಮನದಾಳವನ್ನು ಗಾಂಧೀಜಿ ಅವರಂತೆ ಹೊಕ್ಕ ಮತ್ತೊಬ್ಬ ಸಮಕಾಲೀನನಿರಲಿಲ್ಲ.  ಕಡೆಗೆ ‘ಗಾಂಧೀ’ ಎಂಬ ಚಿತ್ರವನ್ನು ಅದ್ಭುತವಾಗಿ ಮಾಡಿ ವಿಶ್ವದೆಲ್ಲೆಡೆ ಗಾಂಧೀಜಿ ಅಂದರೆ ಏನೆಂದು ಜನಸಾಮಾನ್ಯನ ಮನದಲ್ಲಿ ಒಂದು ಸ್ವರೂಪ ಕೊಟ್ಟವನೂ ಬ್ರಿಟಿಷನೇ.  ನಾವು ಯಾರ ಒಡನೆ ಹೋರಾಡುತ್ತೇವೆಯೋ ಅವರ ಮನದಲ್ಲೇ ಹೀಗೆ ಕುಳಿತುಕೊಳ್ಳುವ ರೀತಿ ಹಿಂದೆ ಆಗಿರದಿದ್ದುದು,  ಇದು ಆತ್ಮ ಜಾಗೃತಿಯನ್ನು ಹೊಂದಿದ ಒಬ್ಬ ಮಹಾತ್ಮ ಜಗತ್ತನ್ನು ಆಳುವ ಪರಿ.  
ಸಹಸ್ರಾರು ವರ್ಷಗಳ ಕಾಲ ಭಾರತ ಎಂಬುದು ಒಡೆದ ಗೂಡಾಗಿ ಛಿದ್ರ ಛಿದ್ರವಾಗಿದ್ದುದು ಚರಿತ್ರೆಯನ್ನು ಬಲ್ಲ ನಮಗೆಲ್ಲಾ ಅರಿಯದ ವಿಚಾರವಲ್ಲ.  ಇಂದೂ ಕೂಡಾ ಹಲವು ಭಾಷೆ, ಹಲವು ಪರಿಯಲ್ಲಿ ನಾವು ಬೇರೆ ಬೇರೆಯಾಗಿಯೇ ಮತ್ತು ನೂರಾರು ವಿಷಯಗಳಲ್ಲಿ ಬಹಳಷ್ಟು ಛಿದ್ರ ಛಿದ್ರವಾಗಿಯೇ ಇದ್ದೇವೆ.  ಇವೆಲ್ಲವುಗಳನ್ನೂ ಯಾವುದೇ ಬೇಲಿಗಳ ಪರಿಧಿಯ ಅಂಚಿಲ್ಲದೆ ಒಂದುಗೂಡಿಸಿದ ಮಹನೀಯತೆ ಮಹಾತ್ಮರದ್ದು.  ತನ್ನನ್ನು ತಾನು ಕಂಡ ಮಹಾತ್ಮ ತನ್ನನ್ನು ಎಲ್ಲೆಲ್ಲಿಯೂ ಕಾಣಿಸುತ್ತಾನೆ.  ರಾಮಾಯಣದಲ್ಲಿ ರಾಮ ಹೀಗೆ ಮಾಡಿದ್ದ ದೃಷ್ಟಾಂತವಿದೆ.  ರಾಮ ಯುದ್ಧ ಮಾಡುವಾಗ ಆತನ ವಿರುದ್ಧ ಯುದ್ಧ ಮಾಡುತ್ತಿದ್ದವರಿಗೆ ತಮ್ಮ ಸಹಚರರೆಲ್ಲಾ ರಾಮನಾಗೇ ಕಂಡುಬಿಡುತ್ತಿದ್ದರಂತೆ.  ಹಾಗೆ ಕಂಡಾಗ ತಮೋ ಗುಣಿಗಳಾದ ರಕ್ಕಸರು ಇಗೋ ರಾಮ ಹೊಡಿ ಎಂದು ತಮ್ಮ ತಮ್ಮನ್ನೇ ಬಡಿದುಕೊಳ್ಳುತ್ತಿದ್ದರು.  ಗುಣಾತೀತರಾದವರು ತಮ್ಮಲ್ಲೇ ರಾಮನನ್ನೂ ಗುರುತಿಸಿಕೊಳ್ಳುತ್ತಿದ್ದರು.  ಗಾಂಧೀಜಿಯವರ ವಿಚಾರದಲ್ಲಿ ಗಮನಿಸಿದರೂ ನಾವು ಕಾಣುವುದು ಇದೇ ಪುನರಾವರ್ತನೆಯನ್ನೇ.  
 
ರಾಮಾಯಣದಲ್ಲಿ ಶ್ರೀರಾಮ ಹೇಳುತ್ತಾರೆ. “ಆತ್ಮಾನಾಂಮಾನುಷಂಮನ್ಯೇ ರಾಮಂ ದಶರಥಾತ್ಮಜಂ”.  ನಾನು ದಶರಥನ ಮಗ, ಸಾಮಾನ್ಯ ಮನುಷ್ಯ ರಾಮ ಎಂಬರ್ಥದಲ್ಲಿ.  ಗಾಂಧೀಜಿ ತಮ್ಮನ್ನು ತಾವು ಅತೀ ಸಾಮಾನ್ಯರನ್ನಾಗಿ ಗುರುತಿಸಿಕೊಂಡಿದ್ದರು.  ಅವರು ಯಾವುದೇ ಜನಪ್ರಿಯತೆಗೂ ಮಾರುಹೋಗಿರಲಿಲ್ಲ.  ತಾವು ಹೇಳಿದ್ದೇ ಅಂತಿಮವಲ್ಲ ಎಂದು ಎಲ್ಲೆಡೆ ಪುನರುಚ್ಚರಿಸಿದರು. ನಾನೂ ತಪ್ಪು ಮಾಡುತ್ತೇನೆ. ಅದೂ ನನ್ನ ಒಂದು ಭಾಗ ಎಂದು ಹೇಳಲು ಅವರಿಗೆ ಯಾವ ಹಿಂಜರಿಕೆಯೂ ಇರಲಿಲ್ಲ.    ಆದರೆ ಬದುಕಿನ ವಿಚಾರದಲ್ಲಿ  ತಾವು ನಂಬಿದ್ದರ ಆಚೆ ಈಚೆ ಕದಲಲಿಲ್ಲ.  ನಾನು ಹೇಳಿದ್ದನ್ನು ಉದಾಹರಣೆಯಾಗಿ ಸ್ವೀಕರಿಸಿ, ನಿಮ್ಮ ನಿಮ್ಮ ಸಂಶೋಧನೆಯ ಆಳದಲ್ಲಿ ನಿಮ್ಮನ್ನು ಕಂಡುಕೊಂಡು ಬಾಳಿರಿ ಎಂದವರು ಅವರು.  
ನಾವೋ ಎಲ್ಲವನ್ನೂ ರೆಡೀಮೇಡ್ ಬಯಸುತ್ತಾ ನಮ್ಮ ದೇವರುಗಳನ್ನೆಲ್ಲಾ ಕಲ್ಲು ಮಾಡಿ ಮಹಾತ್ಮರನ್ನೆಲ್ಲಾ ಫೋಟೋಗಳಲ್ಲಿ, quotationಗಳಲ್ಲಿ ಮಲಗಿಸಿಬಿಟ್ಟು ಅಕ್ಟೋಬರ್ ಎರಡರಂದು “ಬೋಲೋ ಮಹಾತ್ಮಾ ಗಾಂಧೀಜಿ ಕಿ ಜಯ್” ಎನ್ನುವ ವಿಧಿ ಮುಗಿಸಿ, ಉಳಿದಂತೆ ನಮ್ಮ ಎಡಬಿಡದ ಚಿಂತೆಗಳಲ್ಲಿ ಕಳೆದು ಹೋಗಿದ್ದೇವೆ.  
ಇಂದು ನಮ್ಮಲ್ಲಿ ಇದ್ದ ಮಹಾತ್ಮ ಎಂಬ ಶ್ರೇಷ್ಠ ಭಾವಕ್ಕೆ ಅನೈತಿಕ ಬಣ್ಣ ಬಳಿಯುತ್ತಿರುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.  ನಮ್ಮ ಮನದ ಕಣ್ಣಿನಲ್ಲಿರುವ ಅಶುಭ್ರತೆಯನ್ನು ನಾವು  ಲೋಕದಲ್ಲೂ ಕಾಣುತ್ತೇವೆ ಅಷ್ಟೇ. ಇದು ಖಂಡಿತ ದೇಶದ ಮಾನಸಿಕ ಆರೋಗ್ಯಕ್ಕೆ ಮಾರಕ. ನಮ್ಮೊಳಗೇ ಮಾರಕ ರೋಗಗಳನ್ನು ಹರಡಿಕೊಂಡು ನಾವು ಶಾಶ್ವತರು ಅಭಿವೃದ್ಧಿ ಸಾಧಿಸಿಬಿಡುತ್ತಿದ್ದೇವೆ ಎಂಬ ಕ್ಷುಲ್ಲಕ ವ್ಯಾದಿಯುಕ್ತ ಭ್ರಮೆ. 
ಗಾಂಧೀಜಿ ಎಂಬ ಒಂದು ಯುಗ ಒಬ್ಬ ವ್ಯಕ್ತಿಯಿಂದ ಆರಂಭವಾಗಿ, ಆ ವ್ಯಕ್ತಿಯೊಡನೆಯೇ ಅಂತ್ಯವಾಗಿ ಹೋಗಿ, ನಾವು ಹುಟ್ಟುವ ಮುಂಚೆಯೇ ಆಗಿ ಹೋದ ಒಂದು ಕಾಲವಾಗಿದ್ದು ಅಂತಹ ಅಮೂಲ್ಯ ಘಳಿಗೆ ನಮ್ಮ ಜೀವನದಲ್ಲೂ ಫಲಿಸೀತೇ ಎಂದು ಕಾದು ನೋಡುವ ನಿರೀಕ್ಷೆ ಮಾತ್ರ ನಮ್ಮದಾಗಿದೆ.  ಈ ನಿರೀಕ್ಷೆಯ ಹಾದಿಯಲ್ಲಿ ನಾವು ನಮ್ಮೊಳಗಿನ ಆಳದಲ್ಲಿರುವ ಆ ಮಹತ್ತತ್ವವನ್ನು ಅರಸಿದಲ್ಲಿ, ಆ ಮಹಾತ್ಮ ನಮ್ಮ ಮುಂದೆ ಬಂದು ನಿಂತರೂ ನಿಂತಾನು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಪಿಯುಸಿಯಿಂದಲೇ ಸಿಇಟಿ, ನೀಟ್ ಪರೀಕ್ಷೆಗೆ ತರಬೇತಿ