ದಕ್ಷಿಣ ಕನ್ನಡ ಜಿಲ್ಲೆಯಲ್ಲಿ144 ಸೆಕ್ಷನ್ ಬಿಗಿಗೊಳಿಸಲಾಗಿದ್ದು, ಆ.6ರವರೆಗೆ ಮುಂದುವರಿಸಲಾಗಿದೆ. ಈ ನಡುವೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ನಿರಾಕರಿಸಲಾಗಿದೆ.
ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರನ್ನು ಹೊರತು ಪಡಿಸಿ ದ್ವಿಚಕ್ರದಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ ಹೇರುವ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯ ತನಿಖೆ, ಬಂದೋಬಸ್ತ್, ಶಾಂತಿ ಸುವ್ಯವಸ್ಥೆ ಕುರಿತಂತೆ ಮಂಗಳೂರು ಪೊಲೀಸ್ ಕಮಿಷನರೇಟ್, ದ.ಕ ಮತ್ತು ಉಡುಪಿ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಗುರುವಾರ ಸಮಗ್ರ ಮಾಹಿತಿ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆ ಕಾರಣದಿಂದ ಈಗಿರುವ ರಾತ್ರಿ ಸಂಚಾರ ನಿರ್ಬಂಧವನ್ನು ಹಂತ ಹಂತವಾಗಿ ಸಡಿಲಿಸಲು ಚರ್ಚಿಸಲಾಗಿದೆ. ರಾತ್ರಿ ನಿರ್ಬಮನಧದ ಅವಧಿಯನ್ನು 2 ಅಥವಾ 3 ಗಂಟೆಗಳಿಗೆ ಹಂತ ಹಂತವಾಗಿ ಕಡಿಮೆಗೊಳಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಎಡಿಜಿಪಿ ತಿಳಿಸಿದರು.