ಬೆಂಗಳೂರು : ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಅಹೋರಾತ್ರಿ ಹೋರಾಟ ನಡೆಸುತ್ತಿರುವ ಬಿಜೆಪಿ ಇಂದು ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದು, ಆದರೆ ‘ನೀವು ಸಿಎಂ ಕಚೇರಿಗೆ ಮುತ್ತಿಗೆ ಹಾಕುವ ಅವಶ್ಯಕತೆಯಿಲ್ಲ’ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಜಿಂದಾಲ್ ಗೆ ಭೂಮಿ ಪರಭಾರೆ, ರೈತರ ಸಾಲಮನ್ನಾ, ಬರ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ಕಳೆದ 3 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದು, ಇಂದು ಸಿಎಂ ಗೃಹ ಕಚೇರಿಗೆ 5000 ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಸಿಎಂ ಕುಮಾರಸ್ವಾಮಿ, ಪ್ರತಿಭಟನೆಯನ್ನು ಗಮನಿಸಿದ್ದೇನೆ. ನೀವು ಸಿಎಂ ಕಚೇರಿಗೆ ಮುತ್ತಿಗೆ ಹಾಕುವ ಅವಶ್ಯಕತೆಯಿಲ್ಲ ಜಿಂದಾಲ್ ಗೆ ಭೂಮಿ, ಬರ, ರೈತರ ಸಾಲ ಮನ್ನಾ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ. ಪ್ರಧಾನಿ ಸೇರಿದಂತೆ ಕೇಂದ್ರದ ಸಚಿವರೊಂದಿಗೆ ಚರ್ಚಿಸಿದ್ದೇನೆ. ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗಿದೆ ನಿಮ್ಮ ಸಮಯ ತಿಳಿಸಿ ಚರ್ಚೆಗೆ ನಾನು ಸಿದ್ಧ ಎಂದು ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ.