Publish Date: Sat, 02 Mar 2019 (17:55 IST)
Updated Date: Sat, 02 Mar 2019 (17:57 IST)
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿರುವಂತೆ ಸಂಭಾವ್ಯ ಅಭ್ಯರ್ಥಿಗಳ ಲೆಕ್ಕಾಚಾರ ತಲೆಕೆಳಗೆ, ಮೇಲೆ ಆಗುತ್ತಿದೆ. ಸುಮಲತಾ ಸ್ಪರ್ಧೆ ಖಚಿತವಾಗಿರುವ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರ ಬದಲಿಸಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಸ್ಪರ್ಧಿಸುವುದು ಖಚಿತವಾದ ಹಿನ್ನಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಬಿಟ್ಟು ಮೈಸೂರಿನಿಂದ ಕಣಕ್ಕಿಳಿಸಲು ಚಿಂತನೆಗಳು ನಡೆಯುತ್ತಿವೆ.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮೈತ್ರಿಯಾಗಲಿದ್ದು, ಹಾಸನ, ಮಂಡ್ಯ ಮೈಸೂರು ಸೇರಿದಂತೆ ಹಲವು ಕ್ಷೇತ್ರಗಳನ್ನು ಬಿಟ್ಟು ಕೊಡಲು ಪಟ್ಟು ಹಿಡಿದಿದೆ. ಬಹುತೇಕ ಮೈಸೂರು ಕ್ಷೇತ್ರ ಜೆಡಿಎಸ್ ಪಾಲಾಗುವ ನಿರೀಕ್ಷೆ ಇದೆ. ಇತ್ತ ಮಂಡ್ಯದಲ್ಲಿ ಸುಮಲತಾ ಅವರು ಕಣಕ್ಕೆ ಇಳಿಯುತ್ತಿರುವುದರಿಂದ ಕೇತ್ರದಲ್ಲಿ ಜೆಡಿಎಸ್ಗೆ ಹಿನ್ನಡೆಯಾಗುವ ಆತಂಕ ಎದುರಾಗಿದೆ ಎನ್ನಲಾಗಿದೆ.
ಸಚಿವ ಜಿ.ಟಿ. ದೇವೇಗೌಡ ಮಾತನಾಡಿದ್ದು, ಮೈಸೂರಿನಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕು. ಅವರು ಸ್ಪರ್ಧಿಸಿದಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದಿದ್ದಾರೆ. ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲು ನಿಖಿಲ್ ಕುಮಾರಸ್ವಾಮಿ ಬಯಸಿದ್ದಾರೆ. ಅಲ್ಲದೇ ಮೈಸೂರಿನಿಂದ ಸ್ಪರ್ಧಿಸುವಂತೆ ಪಕ್ಷದ ವರಿಷ್ಠ ದೇವೇಗೌಡರಿಗೆ ಒತ್ತಾಯಪಡಿಸಲಾಗಿದೆ.