Publish Date: Wed, 09 Jul 2025 (17:54 IST)
Updated Date: Wed, 09 Jul 2025 (17:58 IST)
ಬೆಂಗಳೂರು: ದೇಶಕ್ಕೆ ಮೋದಿ ಪ್ರಧಾನಿಯಾಗಬೇಕು, ರಾಜ್ಯಕ್ಕೆ ಮತ್ತೊಮ್ಮೆ ಕುಮಾರಸ್ವಾಮಿಯವರು ಸಿಎಂ ಆಗಬೇಕು ಎಂಬುದೇ ನನ್ನ ಆಸೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಜೆಡಿಎಸ್ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ಬಯಕೆ ವ್ಯಕ್ತಪಡಿಸಿದ್ದಾರೆ. ಇದು ಜನರ ಭಾವನೆ ಎಂದಿದ್ದಾರೆ.
ಕುಮಾರಸ್ವಾಮಿ ಮತ್ತೆ ಸಿಎಂ ಆಗಬೇಕು ಎಂಬುದು ಕೇವಲ ನನ್ನ ಆಸೆಯಲ್ಲ. ಇದು ಜನರ ಭಾವನೆಯಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅನೇಕ ಕೊಡುಗೆಗಳನ್ನು ನೀಡಿದ್ದನ್ನು ಜನ ಈಗಲೂ ಸ್ಮರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರೇ ಮತ್ತೊಮ್ಮೆ ಸಿಎಂ ಆಗಬೇಕು ಎಂಬ ಭಾವನೆ ಜನರಲ್ಲೂ ಇದೆ ಎಂದಿದ್ದಾರೆ.
ಕುಮಾರಸ್ವಾಮಿ ಸಿಎಂ ಆದರೆ ರಾಜ್ಯದಲ್ಲಿ ಸಮೃದ್ಧಿಯ ವಾತಾವರಣ ನಿರ್ಮಾಣವಾಗಲಿದೆ. ರಾಜ್ಯ ಪ್ರವಾಸ ಮಾಡುವಾಗ ಜನರ ಭಾವನೆಗಳನ್ನು ಅರಿತಿದ್ದೇನೆ. ಬಿಜೆಪಿ-ಜೆಡಿಎಸ್ ಮೈತ್ರಿ ಶಾಶ್ವತವಾಗಿರಲಿದೆ. ಇದು ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಇರಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಸರ್ಕಾರ ರಚನೆ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.