ಮಂಡ್ಯ: ಸಿದ್ದರಾಮಯ್ಯನವರೇ ನೀವು ಮಾತೃಪಕ್ಷಕ್ಕೆ ಮೋಸ ಮಾಡಿ ಹೋಗಿರುವುದನ್ನು ನೆನಪಿನಲ್ಲಿಡಿ. ಇದು ಹೆತ್ತ ತಾಯಿಗೆ ದ್ರೋಹ ಬಗೆದ ಹಾಗೇ. ನೀವು ಇಲ್ಲಿ ಉಂಡು, ತಿಂದು ಹೋದವರು ಇದೀಗ ನಮ್ಮ ಪಕ್ಷದ ವಿರುದ್ಧ ಮಾತನಾಡುತ್ತೀರಾ. ನಮ್ಮ ಪಕ್ಷದ ಕಾರ್ಯಕರ್ತರೇ ನಮ್ಮ ಶಕ್ತಿಯಾಗಿದ್ದು, ನಾವು ಧೃತಿಗೆಡುವುದಿಲ್ಲ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಜೆಡಿಎಸ್ ಬೇರೆಯವರ ಹೆಗಲ ಮೇಲೆ ಕೈ ಹಾಕಿಕೊಂಡೇ ಅಧಿಕಾರಕ್ಕೆ ಬರಬೇಕು ಎಂದು ಸಿದ್ದರಾಮಯ್ಯ ಅವರು ಕೆಆರ್‌ಎಸ್ ಬಾಗಿನ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕೆ.ಆರ್. ಪೇಟೆಯಲ್ಲಿ ಮಂಗಳವಾರ ನಡೆದ ಜೆಡಿಎಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ನಿಖಿಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಯಾರೋ ಕಟ್ಟಿದ ಪಕ್ಷದಲ್ಲಿ ನೀವು ಹೋಗಿ ಕಾಂಗ್ರೆಸ್ ಮುಖಂಡರಿಗೆ ಅಧಿಕಾರ ತಪ್ಪಿಸಿದ್ರಿ. ತಮ್ಮ ಅಧಿಕಾರದ ಆಸೆಯಿಂದ ಹಲವು ದಲಿತ ನಾಯಕರನ್ನು ತುಳಿದಿದ್ದೀರಿ. ನಮ್ಮ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುತ್ತೀರಾ, ನಮ್ಮ ಕಾರ್ಯಕರ್ತರು ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಇದು ನಮ್ಮ ತಾತನ (ಎಚ್.ಡಿ. ದೇವೇಗೌಡ) ಬಯಕೆ ಎಂದರು.
ಮುಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ₹2 ಸಾವಿರ ಅಲ್ಲ, ₹5 ಸಾವಿರ ಕೊಡುತ್ತೇವೆ. ನಾವು ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗದಂತೆ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುತ್ತೇವೆ ಎಂದರು.