ಬೆಂಗಳೂರು: ವಯನಾಡಿನಲ್ಲಿ ಉಪಚುನಾವಣೆಯಲ್ಲಿ ತನ್ನ ಪಕ್ಷಕ್ಕೆ ಅನುಕೂಲ ಮಾಡಿಕೊಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಬಂಡೀಪುರ ಅರಣ್ಯಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿತಾ ಎಂಬ ಅನುಮಾನ ಮೂಡಿದೆ.
ಬಂಡೀಪುರ ನಿಷೇಧಿತ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ನೀಡಿದರೆ ಇಲ್ಲಿನ ಪ್ರಾಣಿ ಸಂಕುಲಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನಿಷೇಧ ಹೇರಲಾಗಿತ್ತು. ಕಳೆದ ಹದಿನೈದು ವರ್ಷದಿಂದ ಜಾರಿಯಲ್ಲಿ ನಿಷೇಧ ಹಿಂತೆಗೆಯುವುದಾಗಿ ಕರ್ನಾಟಕ ಸರ್ಕಾರದ ಹಿರಿಯ ನಾಯಕರೇ ಹೇಳಿಕೆ ನೀಡಿದ್ದಾರೆ.
ಇದರಿಂದ ವನ್ಯ ಜೀವಿಗಳಿಗೆ ತೊಂದರೆಯಾಗಲಿದೆ ಎಂಬುದು ತಜ್ಞರ ಆತಂಕವಾಗಿದೆ. ಆದರೆ ಇತ್ತೀಚೆಗೆ ವಯನಾಡು ಉಪಚುನಾವಣೆಯಲ್ಲಿ ಬಂಡೀಪುರ ಅರಣ್ಯಪ್ರದೇಶದ ನಡುವೆ ಹಾದುಹೋಗುವ ಹೆದ್ದಾರಿಯಲ್ಲಿ ರಾತ್ರಿ ನಿಷೇಧ ಹಿಂತೆಗೆಯುವ ವಿಚಾರ ಚರ್ಚೆಗೆ ಬಂದಿತ್ತು. ಇಲ್ಲಿ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಕೇರಳಿಗರ ಆಗ್ರಹವಾಗಿತ್ತು.
ಇದೀಗ ವಯನಾಡು ಉಪಚುನಾವಣೆ ಸಂದರ್ಭದಲ್ಲಿ ತನ್ನ ಪಕ್ಷಕ್ಕೆ ಲಾಭ ಮಾಡಿಕೊಡುವ ಉದ್ದೇಶದಿಂದ ಕೇರಳದ ಬಹುದಿನಗಳ ಬೇಡಿಕೆಯನ್ನು ಕರ್ನಾಟಕ ಸರ್ಕಾರ ಈಡೇರಿಸಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ರಕ್ಷಿತಾರಣ್ಯದ ನಡುವೆ ರಾಷ್ಟ್ರೀಯ ಹೆದ್ದಾರಿ ಸಾಗುತ್ತದೆ. ಇಲ್ಲಿ ರಾತ್ರಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕಿ ಎಷ್ಟೋ ವನ್ಯ ಜೀವಿಗಳು ಸಾವನ್ನಪ್ಪಿದ್ದವು. ಹೀಗಾಗಿ ಈಗ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಿದರೆ ಮತ್ತೆ ವನ್ಯ ಸಂಕುಲಕ್ಕೆ ಅಪಾಯವಾಗಲಿದೆ.