ಬೆಂಗಳೂರು: ಹೊಸ ವರ್ಷದ ಆಚರಣೆ ನಿಮಿತ್ತ ಜನ ಮುಗಿಬಿದ್ದು ಎಣ್ಣೆ ಖರೀದಿ ಮಾಡಿದ್ದು ಇದರಿಂದಾಗಿ ಅಬಕಾರಿ ಇಲಾಖೆಗೆ ಭಾರೀ ಲಾಭವಾಗಿದೆ ಎಂದು ತಿಳಿದುಬಂದಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿಯೇ ನಡೆದಿದೆ. ಪಾನ ಪ್ರಿಯರು ಕುಡಿದು, ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದ್ದಾರೆ. ಹಲವೆಡೆ ಅಸಭ್ಯ ವರ್ತನೆ ಬಗ್ಗೆ ವರದಿಗಳಾಗಿವೆ.
ಅದೇನೇ ಇದ್ದರೂ ಅಬಕಾರಿ ಇಲಾಖೆಗೆ ಮಾತ್ರ ಇದರಿಂದ ಭರ್ಜರಿ ಲಾಭವೇ ಆಗಿದೆ. ನಿನ್ನೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮದ್ಯ ಖರೀದಿಯಲ್ಲಿ ದಾಖಲೆಯಾಗಿದ್ದು ಬರೋಬ್ಬರಿ 300 ಕೋಟಿ ರೂ.ಗೂ ಹೆಚ್ಚು ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ದುಪ್ಪಟ್ಟಾಗಿದೆ.
ಕೇವಲ ನಿನ್ನೆ ಮಾತ್ರವಲ್ಲ, ಕಳೆದ ಎರಡು ದಿನಗಳಿಂದಲೇ ಹಲವರು ಮದ್ಯ ಖರೀದಿ ಮಾಡಲು ಶುರು ಮಾಡಿದ್ದರು. ಒಟ್ಟು 10,27, 060 ಬಾಕ್ಸ್ ಮದ್ಯ ಮಾರಾಟವಾಗಿದ್ದು ಕಳೆದ ಎರಡು ದಿನಗಳಲ್ಲಿ ಒಟ್ಟು 408 ಕೋಟಿ ರೂ.ಗೂ ಹೆಚ್ಚು ಆದಾಯ ಬಂದಿದೆ ಎಂದು ತಿಳಿದುಬಂದಿದೆ.