ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆ ಬರುತ್ತಾರೆಂದು ಬೆಂಗಳೂರಿನ ಮೆಟ್ರೋ ನಿಲ್ದಾಣ ಮೆಟ್ಟಿಲುಗಳನ್ನು ಸಿಬ್ಬಂದಿಗಳು ಕ್ಲೀನಿಂಗ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ದಿನಕ್ಕೊಂದು ಕಡೆ ಪಾದ ಬೆಳೆಸಿ ಸಾರ್ ಆಗ ಬೆಂಗಳೂರು ನಗರವಿಡೀ ಸ್ವಚ್ಛವಾಗುತ್ತದೆ ಎಂದು ಕಾಲೆಳೆದಿದ್ದಾರೆ.
ಬೆಂಗಳೂರಿನಲ್ಲಿ ಮೊನ್ನೆಯಿಂದ ಸುರಿದ ಮಳೆಗೆ ಹಲವು ಕಡೆ ಹಾನಿಗಳಾಗಿತ್ತು. ಮಳೆ ಹಾನಿ ಪ್ರದೇಶಗಳ ವೀಕ್ಷಣೆಗಾಗಿ ಇಂದು ಸಿಎಂ ಸಿದ್ದರಾಮಯ್ಯ ಸಿಟಿ ರೌಂಡ್ಸ್ ಮಾಡಲಿದ್ದಾರೆ. ಸಿಎಂ ಸಿಲ್ಕ್ ಬೋರ್ಡ್ ನಲ್ಲಿ ಮಳೆ ಅನಾಹುತ ವೀಕ್ಷಣೆಗೆ ಬರುತ್ತಾರೆಂದು ತಿಳಿದು ಮೆಟ್ರೋ ಸಿಬ್ಬಂದಿ ನಿಲ್ದಾಣದ ಮೆಟ್ಟಿಲುಗಳನ್ನು ಬ್ರಷ್ ಹಾಕಿ ತಿಕ್ಕಿ ತೊಳೆದು ಸ್ವಚ್ಛ ಮಾಡುತ್ತಿದ್ದುದು ಕಂಡುಬಂತು.
ಇದಕ್ಕೆ ನೆಟ್ಟಿಗರು ಲೇವಡಿ ಮಾಡಿದ್ದಾರೆ. ಪ್ರತಿನಿತ್ಯ ಸಿಎಂ ಸಾಹೇಬರು ಹೀಗೆ ಒಂದೊಂದು ಕಡೆಗೆ ಹೋಗುತ್ತಿದ್ದರೆ ಆ ಭಾಗವೆಲ್ಲಾ ಸ್ವಚ್ಛವಾಗುತ್ತದೆ ಎಂದಿದ್ದಾರೆ. ಇನ್ನೊಂದೆಡೆ ಸಿಎಂಗಾಗಿ ರೆಡ್ ಕಾರ್ಪೆಟ್ ಹಾಕಲಾಗಿತ್ತು. ಇದೂ ಭಾರೀ ಟೀಕೆಗೆ ಗುರಿಯಾಗಿದೆ. ಮಳೆಗೆ ಜನ ಸಾಯತ್ತಿದ್ದರೆ ನಿಮಗೆ ರೆಡ್ ಕಾರ್ಪೆಟ್ ಶೋಕಿ ಬೇಕಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.