ನವದೆಹಲಿ: ನಡೆದಾಡುವ ದೇವರು ಎಂದೇ ಭಕ್ತರು ಪೂಜಿಸುತ್ತಿದ್ದ, ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ 117 ನೇ ಜಯಂತಿಗೆ ಪ್ರಧಾನಿ ಮೋದಿ ಇಂದು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.
ಪ್ರಧಾನಿ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿ ಶಿವಕುಮಾರ ಸ್ವಾಮೀಜಿ ಜಯಂತಿಗೆ ಶುಭ ಹಾರೈಸಿದ್ದಾರೆ. ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಅವರಿಗೆ ನಮನಗಳು. ನಿಸ್ವಾರ್ಥ ಮತ್ತು ಕರುಣೆಯ ನೈಜ ಸಾಕಾರಮೂರ್ತಿಗಳಾಗಿದ್ದ ಶ್ರೀಗಳು ಸಮಾಜ ಸೇವೆಗೆ ಅಪ್ರತಿಮ ಕೊಡುಗೆಗಳನ್ನು ನೀಡಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಅವರ ಕೆಲಸವು ಲಕ್ಷಾಂತರ ಜನರ ಜೀವನವನ್ನು ತಲುಪಿದೆ ಮತ್ತು ಸಮರ್ಪಣೆ ಹಾಗೂ ಮಾನವೀಯ ಸೇವೆಗೆ ಅತ್ಯುನ್ನತ ಉದಾಹರಣೆಯಾಗಿದೆ. ನಮ್ಮ ಸಮಾಜದ ಕುರಿತಾಗಿ ಶ್ರೀಗಳ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ನಿರಂತರ ಕಾರ್ಯಮಗ್ನರಾಗಿರುತ್ತೇವೆ ಎಂದು ಕನ್ನಡದಲ್ಲೇ ಟ್ವೀಟ್ ಮಾಡಿದ್ದರು.
ಮೋದಿ ಟ್ವೀಟ್ ಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಈ ಪೈಕಿ ಕೆಲವರು ಸ್ವಾಮೀಜಿಗೆ ಮೊದಲು ಭಾರತ ರತ್ನ ಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಮೊದಲು ಅವರಿಗೆ ಭಾರತ ರತ್ನ ನೀಡಿ. ಬಳಿಕ ವಿಶ್ ಮಾಡಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಹಲವು ಬಾರಿ ಕನ್ನಡಿಗರು ಶಿವಕುಮಾರ ಸ್ವಾಮೀಜಿಗೆ ಮರಣೋತ್ತರವಾಗಿಯಾದರೂ ಭಾರತ ರತ್ನ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತಲೇ ಇದ್ದಾರೆ. ಆದರೆ ಇದುವರೆಗೆ ಅವರಿಗೆ ಭಾರತ ರತ್ನ ಸಿಕ್ಕಿಲ್ಲ. ಈಗ ಮೋದಿ ವಿಶ್ ಮಾಡಿದಾಗ ನೆಟ್ಟಿಗರು ಅದನ್ನೇ ನೆನಪಿಸಿದ್ದಾರೆ.