ಬೆಂಗಳೂರು: ಹಿಮಾಚಲಪ್ರದೇಶದ ಪ್ರವಾಹ ಪರಿಹಾರ ನಿಧಿಗೆ ರಾಜ್ಯ ಸರ್ಕಾರದ ವತಿಯಿಂದ 5 ಕೋಟಿ ರೂ. ನೆರವು ಘೋಷಿಸಿದ ಸಿಎಂ ಸಿದ್ದರಾಮಯ್ಯಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ನಮಗೇ ದುಡ್ಡಿಲ್ಲ, ಇನ್ನು ಬೇರೆಯವರಿಗೆ ಕೊಡ್ತಿದ್ದೀರಿ ಎಂದಿದ್ದಾರೆ.
ಈ ಹಿಂದೆ ಕೇರಳದ ವಯನಾಡು ದುರಂತಕ್ಕೆ ಕರ್ನಾಟಕ ಸರ್ಕಾರ 100 ಮನೆ ನಿರ್ಮಿಸಿ ಕೊಡುವುದಾಗಿ ಘೋಷಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಕೇರಳದ ವಯನಾಡಿನಲ್ಲಿ ಆನೆ ದುರಂತದಿಂದ ಸಾವಿಗೀಡಾದ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಿತ್ತು. ಇದೆಲ್ಲವೂ ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಅವರ ಅಣತಿಯಂತೆ ನೀಡಲಾಗಿದೆ ಎಂದು ಟೀಕೆಗೊಳಗಾಗಿತ್ತು.
ಇದೀಗ ಪಂಜಾಬ್, ಉತ್ತರಾಖಂಡ ಸೇರಿದಂತೆ ದೇಶದ ಹಲವು ಕಡೆ ಪ್ರವಾಹವಾಗಿದೆ. ಹಾಗಿದ್ದರೂ ಕಾಂಗ್ರೆಸ್ ಆಡಳಿತವಿರುವ ಹಿಮಾಚಲಪ್ರದೇಶಕ್ಕೆ ಮಾತ್ರ 5 ಕೋಟಿ ರೂ. ಪರಿಹಾರ ನೀಡಲು ಮುಂದಾಗಿರುವುದಕ್ಕೆ ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ.
ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವುದು ಇದಕ್ಕೇ ಇರಬೇಕು. ಹಾಸನ ದುರಂತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ಕೊಡಲು ದುಡ್ಡಿಲ್ಲ ಅಂತೀರಿ. ಉತ್ತರ ಕರ್ನಾಟಕದ ಪ್ರವಾಹ ನಿಮ್ಮ ಕಣ್ಣಿಗೆ ಕಾಣಿಸಲ್ಲ. ಕಾಂಗ್ರೆಸ್ ಆಡಳಿತವಿರುವ ಬೇರೆ ರಾಜ್ಯಗಳಿಗೆ ಬೇಕಾಬಿಟ್ಟಿ ಕೊಡ್ತಿರಿ ಎಂದು ಕುಟುಕಿದ್ದಾರೆ.