ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್ ನ ಇಡ್ಲಿ ಮತ್ತು ದೋಸೆ ಹಿಟ್ಟಿನ ಉತ್ಪನ್ನ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈಗ ಈ ಉತ್ಪನ್ನಕ್ಕೆ ಭಾರೀ ಬೇಡಿಕೆ ಬಂದಿದ್ದು ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.
ಕೆಎಂಎಫ್ ನಂದಿನಿ ಬ್ರ್ಯಾಂಡ್ ನ ದೋಸೆ, ಇಡ್ಲಿ ಹಿಟ್ಟನ್ನು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ದರು. ಮೊದಲು ಈ ಉತ್ಪನ್ನವನ್ನು ಬೆಂಗಳೂರಿನ ಕೆಲವು ನಂದಿನಿ ಕೇಂದ್ರಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿತ್ತು.
ಆದರೆ ಕೆಲವೇ ದಿನಗಳಲ್ಲಿ ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಕೇವಲ ಮೂರು ದಿನದಲ್ಲಿ 2250 ಮೆಟ್ರಿಕ್ ಟನ್ ಹಿಟ್ಟು ಮಾರಾಟವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿಗರಿಂದ ಸಿಕ್ಕಿದ ಅದ್ಭುತ ಪ್ರತಿಕ್ರಿಯೆ ಕೆಎಂಎಫ್ ಉತ್ಸಾಹ ಹೆಚ್ಚಿಸಿದೆ.
ಹೀಗಾಗಿ ಇದೀಗ ರಾಜ್ಯದ ಇತರೆ ಭಾಗಗಳಲ್ಲೂ ದೋಸೆ, ಇಡ್ಲಿ ಹಿಟ್ಟು ಮಾರಾಟ ವಿಸ್ತರಿಸಲು ಕೆಎಂಎಫ್ ನಿರ್ಧರಿಸಿದೆ. ಕೆಎಂಎಫ್ ಇದೀಗ ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ 450 ಗ್ರಾಂ ಹಿಟ್ಟಿಗೆ 40 ರೂ., 900 ಗ್ರಾಂ ಹಿಟ್ಟಿಗೆ 80 ರೂ.ಗಳಂತೆ ಮಾರಾಟ ಮಾಡುತ್ತಿದೆ.