ಬೆಂಗಳೂರು: ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಈಗ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ನಂದಿನಿ ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ ಬಿಡಲಾಗಿದೆ. ಇದರ ದರ ಎಷ್ಟು ವಿವರ ಇಲ್ಲಿದೆ.
ನಿನ್ನೆ ಸಿಎಂ ಸಿದ್ದರಾಮಯ್ಯ ನಂದಿನಿ ದೊಸೆ, ಇಡ್ಲಿ ಹಿಟ್ಟಿನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ನಂದಿನಿ ಇಡ್ಲಿ ಹಿಟ್ಟು ಬಿಡುಗಡೆಯಾಗುವ ಬಗ್ಗೆ ಸುದ್ದಿಗಳಿತ್ತು.
ಆದರೆ ಬಳಿಕ ಇದರ ಬಿಡುಗಡೆ ಕೆಲವು ದಿನ ಮುಂದೂಡಲಾಗಿತ್ತು. ಇದಕ್ಕೆ ಕೆಲವು ಖಾಸಗಿ ಸಂಸ್ಥೆಗಳ ಲಾಬಿಯೂ ಕಾರಣ ಎಂಬ ಆರೋಪಗಳೂ ಕೇಳಿಬಂದಿತ್ತು. ಆದರೆ ಈಗ ಕೊನೆಗೂ ನಂದಿನಿ ತನ್ನದೇ ಬ್ರ್ಯಾಂಡ್ ನ ಇಡ್ಲಿ, ದೋಸೆ ಹಿಟ್ಟು ಬಿಡುಗಡೆ ಮಾಡಿದೆ. ಇದರಲ್ಲಿ ಶೇ.5 ರಷ್ಟು ಪ್ರೊಟೀನ್ ಕೂಡಾ ಇದ್ದು, ನಂದಿನಿಯ ಇತರೆ ಉತ್ಪನ್ನಗಳಂತೆ ಗುಣಮಟ್ಟವನ್ನು ಕಾಪಾಡಿಕೊಳ್ಳಲಿದೆ.
ಸದ್ಯಕ್ಕೆ ಈ ಉತ್ಪನ್ನ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಮಾತ್ರವೇ ಲಭ್ಯವಿರಲಿದೆ. ನಂದಿನಿ ಔಟ್ ಲೆಟ್ ಗಳಲ್ಲಿ ಮಾತ್ರವೇ ಸಿಗಲಿದೆ. 450 ಗ್ರಾಂ ಹಿಟ್ಟಿನ ಪ್ಯಾಕೆಟ್ ಗೆ 40 ರೂ. ಮತ್ತು 900 ಗ್ರಾಂ ತೂಕದ ಪೊಟ್ಟಣಕ್ಕೆ 80 ರೂ. ನಿಗದಿಗೊಳಿಸಲಾಗಿದೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಇಂತಹ ರೆಡಿ ಹಿಟ್ಟುಗಳಿಗೆ ಹೆಚ್ಚು ಬೇಡಿಕೆಯಿರುತ್ತವೆ. ಹೀಗಾಗಿ ಇಲ್ಲಿನ ಜನ ನಂದಿನಿಯ ಈ ಹೊಸ ಉತ್ಪನ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಈ ಉತ್ಪನ್ನ ಯಶಸ್ವಿಯಾದರೆ ರಾಜ್ಯದ ಉಳಿದ ಭಾಗಗಳಲ್ಲೂ ಲಭ್ಯವಾಗಲಿದೆ.