ಬೆಂಗಳೂರು: ದುಬೈ ಏರ್ ಶೋನಲ್ಲಿ ಭಾರತ ವಾಯುಸೇನೆಯ ತೇಜಸ್ ಯುದ್ಧ ವಿಮಾನ ಪತನಕ್ಕೆ ಕೆಲವೇ ಕ್ಷಣಗಳ ಮೊದಲು ಪೈಲೆಟ್ ನಮಾಂಶ್ ಸ್ಯಾಲ್ ಕೊನೆಯ ಕ್ಷಣದ ವಿಡಿಯೋ ವೈರಲ್ ಆಗಿದೆ.
ತೇಜಸ್ ಯುದ್ಧ ವಿಮಾನ ಪತನದಲ್ಲಿ ಪೈಲೆಟ್ ನಮಾಂಶ್ ವೀರಮರಣವನ್ನಪ್ಪಿದ್ದಾರೆ. ಅವರ ಸಾವು ಇಡೀ ದೇಶಕ್ಕೇ ದುಃಖ ತಂದಿದೆ. ಸಾವಿಗೆ ಮುನ್ನ ವಾಯು ಸೇನೆಯ ಅಧಿಕಾರಿಗಳೊಂದಿಗೆ ಅವರಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತಿಹಾಸದಲ್ಲೇ ತೇಜಸ್ ಯುದ್ಧ ವಿಮಾನ ಪತನವಾಗುತ್ತಿರುವುದು ಇದು ಕೇವಲ ಎರಡನೇ ಬಾರಿ. 37 ವರ್ಷದ ನಮಾಂಶ್ ಸ್ಯಾಲ್ ಕೆಳಮಟ್ಟದ ಏರೋಬ್ಯಾಟಿಕ್ ಕುಶಲತೆಯನ್ನು ಪ್ರದರ್ಶಿಸುತ್ತಿದ್ದಾಗ ದುರ್ಘಟನೆ ನಡೆದಿದೆ. ನೆಲಕ್ಕೆ ಅಪ್ಪಳಿಸಿದ ಕ್ಷಣದಲ್ಲೇ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ವಿಮಾನ ಹೊತ್ತಿ ಉರಿದಿದೆ. ಅದರಲ್ಲಿದ್ದ ನಮಾಂಶ್ ಕೂಡಾ ಸಜೀವ ದಹನವಾಗಿದ್ದಾರೆ.
ಮೂಲತಃ ಹಿಮಾಚಲಪ್ರದೇಶದವರಾದ ನಮಾಂಶ್ ಪತ್ನಿ ಕೂಡಾ ವಾಯುಸೇನಾ ಅಧಿಕಾರಿ. ಅವರಿಗೆ ಓರ್ವ ಪುತ್ರಿಯಿದ್ದಾಳೆ. ಅವರ ಪೋಷಕರೂ ಸೇನೆಗೆ ಸೇವೆ ಸಲ್ಲಿಸಿದವರೇ. ಇಡೀ ಕುಟುಂಬವೇ ಸೇನೆಯಲ್ಲಿ ಸೇವೆ ಸಲ್ಲಿಸಿತ್ತು. ಇದೀಗ ನಮಾಂಶ್ ಸಾವು ಕುಟುಂಬಕ್ಕೆ ತುಂಬಲಾರದ ದುಃಖ ತಂದಿದೆ.