Select Your Language

Notifications

webdunia
webdunia
webdunia
webdunia

ಆಸಿಡ್ ದಾಳಿ ಪ್ರಕರಣ: ಆರೋಪಿ ನಾಗೇಶ್ ಕಾಲಿಗೆ ಗುಂಡೇಟು!

ಆಸಿಡ್ ದಾಳಿ ಪ್ರಕರಣ: ಆರೋಪಿ ನಾಗೇಶ್ ಕಾಲಿಗೆ ಗುಂಡೇಟು!
ಬೆಂಗಳೂರು , ಶನಿವಾರ, 14 ಮೇ 2022 (10:05 IST)
ಬೆಂಗಳೂರು: ನಗರದ ಯುವತಿ ಮೇಲೆ ನಡೆದಿದ್ದ ಆಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ಬಾಬು ಅಲಿಯಾಸ್ ನಾಗೇಶ್ ಕಾಲಿಗೆ ಗುಂಡೇಟು ತಗುಲಿದೆ. ಕೆಂಗೇರಿಯ ಮೇಲ್ಸೆತುವೆ ಬಳಿ ಈ ಘಟನೆ ನಡೆದಿದೆ.
 
ತಮಿಳುನಾಡಿನ ತಿರುಣ್ಣಾಮಲೈನಿಂದ ಕರೆದುಕೊಂಡು ಬರುವ ವೇಳೆ ಮೂತ್ರ ವಿಸರ್ಜನೆಗೆ ನಿಲ್ಲಿಸಿ ಎಂದು ಆರೋಪಿ ನೈಸ್ ರೋಡಲ್ಲಿ ಕೇಳಿಕೊಂಡಿದ್ದ. ಆದರೆ ಇದಕ್ಕೆ ಅವಕಾಶ ಕೊಡದ ಪೊಲೀಸರು ಬೆಂಗಳೂರು ಸಿಟಿಯ ಕೆಂಗೇರಿ ಮೇಲ್ಸೇತುವೆ ಬಳಿ ನಿಲ್ಲಿಸಿದ್ದರು.ಈ ವೇಳೆ ನಾಗೇಶ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಕಾನ್ಸ್ಟೇಬಲ್ ಮಹಾದೇವಯ್ಯ ನಾಗೇಶ್‌ನನ್ನು ಹಿಡಿಯಲು ಹೋಗಿದ್ದಾನೆ. ಆದರೆ ಅಷ್ಟರಲ್ಲೇ ಆರೋಪಿ ಮಹಾದೇವಯ್ಯ ಮೇಲೆಡ ಕಲ್ಲಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. 
 
ಈ ವೇಳೆ  ಇನ್ಸ್ಪೆಕ್ಟರ್ ಪ್ರಶಾಂತ್ ಆರೋಪಿಯನ್ನ ಹಿಡಿಯಲು ಗಾಳಿಯಲ್ಲಿ ಒಂದು ಬಾರಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಆದರೆ ನಾಗೇಶ್ ಮಾತ್ರ ಇನ್ಸ್ಪೆಕ್ಟರ್ ಎಚ್ಚರಿಕೆಗೆ ಬಗ್ಗದೆ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಅಗ ಪೊಲೀಸರು ಆರೋಪಿ ನಾಗೇಶ್ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಸದ್ಯ ಗುಂಡೇಟು ತಿಂದ ಆರೋಪಿಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ  ಬಿಜಿಎಸ್ ಆಸ್ಪತ್ರೆಗೆ ಆರೋಪಿಯನ್ನು ದಾಖಲು ಮಾಡಲಾಗಿದೆ. 
 
ಅನ್ನಪೂರ್ಣೇಶ್ವರಿನಗರದ ‘ಡಿ’ ಗ್ರೂಪ್‌ ಲೇಔಟ್‌ ನಿವಾಸಿ ನಾಗೇಶ್‌(34) ಬಂಧಿತ. ಈತ ನೆರೆಯ ತಮಿಳುನಾಡಿನ ತಿರುವಣ್ಣಾಮಲೈನ ಶಿವನ ದೇವಾಲಯವಿರುವ ರಮಣ ಆಶ್ರಮದಲ್ಲಿ ಸ್ವಾಮೀಜಿ ಸೋಗಿನಲ್ಲಿ ಧ್ಯಾನ ಮಾಡುವಾಗಲೇ ಪೊಲೀಸರ ಬಲೆಗೆ ಬಿದ್ದಿದ್ದ. ಪೊಲೀಸರು ಆರೋಪಿಯನ್ನು ಶುಕ್ರವಾರ ರಾತ್ರಿ ಬೆಂಗಳೂರಿಗೆ ಕರೆತರುತ್ತಿದ್ದರು.
 
ಆ್ಯಸಿಡ್‌ ದಾಳಿ ಬಳಿಕ ತಲೆಮರೆಸಿಕೊಂಡಿದ್ದ ನಾಗೇಶ್‌ ಬಂಧನಕ್ಕೆ ಪೊಲೀಸರ 10 ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು. ಆರೋಪಿಯ ಬಗ್ಗೆ ಸಣ್ಣ ಸುಳಿವು ಸಿಗದ ಪರಿಣಾಮ ಕನ್ನಡ, ತೆಲುಗು, ತಮಿಳು, ಇಂಗ್ಲಿಷ್‌ ಭಾಷೆಯಲ್ಲಿ ಆರೋಪಿಯ ಭಾವಚಿತ್ರ ಸಹಿತ ಕರಪತ್ರ ಮುದ್ರಿಸಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಸಾರ್ವಜನಿಕ ಸ್ಥಳಗಳು, ದೇವಸ್ಥಾನಗಳು, ಆಶ್ರಯಮಗಳು, ಮಠಗಳು ಸೇರಿದಂತೆ ಸಾರ್ವಜನಿಕರು ಹೆಚ್ಚು ಸೇರುವ ಸ್ಥಳಗಳಲ್ಲಿ ಹಂಚಲಾಗಿತ್ತು.
 
ಪೊಲೀಸರ ಒಂದು ತಂಡ ಗುರುವಾರ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಶಿವನ ದೇವಾಲಯವಿರುವ ರಮಣ ಆಶ್ರಮದಲ್ಲಿಯೂ ಕರಪತ್ರ ಹಂಚಿತ್ತು. ಈ ಕರಪತ್ರದಲ್ಲಿ ಮುದ್ರಿತವಾಗಿದ್ದ ಭಾವಚಿತ್ರ ಗಮನಿಸಿದ್ದ ಸ್ಥಳೀಯರು ಕೆಲ ದಿನಗಳಿಂದ ಆಶ್ರಮದಲ್ಲಿ ಕಾವಿಧಾರಿಯಾಗಿ ಇರುವ ನಾಗೇಶ್‌ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
 
ಈ ಮಾಹಿತಿ ಆಧರಿಸಿ ಪೊಲೀಸರು ಶುಕ್ರವಾರ ಸಂಜೆ ಭಕ್ತರ ಸೋಗಿನಲ್ಲಿ ಆಶ್ರಮಕ್ಕೆ ತೆರಳಿ ಕಾವಿಧಾರಿಯಾಗಿದ್ದ ನಾಗೇಶ್‌ನ ಚಲನವಲನದ ಮೇಲೆ ನಿಗಾವಹಿಸಿದ್ದರು. ಬಳಿಕ ಆಶ್ರಮದ ಮೇಲ್ವಿಚಾರಕರನ್ನು ಸಂಪರ್ಕಿಸಿ ನಾಗೇಶ್‌ನ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ಕಾವಿಬಟ್ಟೆಕಳಚಿಸಿ ವಿಚಾರಣೆ ಮಾಡಿದಾಗ ನಾಗೇಶನ್‌ ನಿಜ ಸ್ವರೂಪ ಬೆಳಕಿಗೆ ಬಂದಿದೆ.
 
ಹೆಗ್ಗನಹಳ್ಳಿ ನಿವಾಸಿಯಾಗಿರುವ ಆರೋಪಿ ನಾಗೇಶ್‌ ತನ್ನನ್ನು ಪ್ರೀತಿಸುವಂತೆ 25 ವರ್ಷದ ಯುವತಿ ಹಿಂದೆ ಬಂದಿದ್ದ. ಪ್ರೀತಿ ನಿರಾಕರಿಸಿದ್ದ ಯುವತಿ ತನ್ನಪಾಡಿಗೆ ತಾನು ಇದ್ದಳು. ಎಂಕಾಂ ಪದವಿಧರೆಯಾದ ಯುವತಿ ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಏ.28ರಂದು ಬೆಳಗ್ಗೆ ಸುಂಕದಕಟ್ಟೆಯಲ್ಲಿರುವ ಕಂಪನಿಯ ಕಚೇರಿ ಬಳಿ ಬಂದಿದ್ದಳು. ಈ ವೇಳೆ ಆ್ಯಸಿಡ್‌ ತುಂಬಿದ ಬಾಟಲಿಯೊಂದಿಗೆ ಪ್ರತ್ಯಕ್ಷನಾದ ಕಿಡಿಗೇಡಿ ನಾಗೇಶ್‌, ಏಕಾಏಕಿ ಯುವತಿ ಮೇಲೆ ಆ್ಯಸಿಡ್‌ ದಾಳಿ ನಡೆಸಿ ಪರಾರಿಯಾಗಿದ್ದ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮೇ ಅಂತ್ಯಕ್ಕೇ ರಾಜ್ಯಕ್ಕೆ ಮುಂಗಾರು ಪ್ರವೇಶ