Publish Date: Mon, 25 Feb 2019 (18:20 IST)
Updated Date: Mon, 25 Feb 2019 (18:22 IST)
ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆಯ ಬಳಿಕ ರಾಜಕೀಯ ಹಿಂಸಾಚಾರ ಮರುಕಳಿಸಿದ್ದು, ಮನೆಗೆ ಬೆಂಕಿ ಹಚ್ಚಲಾಗಿದೆ.
ಕಾಸರಗೋಡಿನ ಪೆರಿಯ ಪರಿಸರದಲ್ಲಿ ರಾಜಕೀಯ ಹಿಂಸಾಚಾರ ಮರುಕಳಿಸುತ್ತಿದ್ದು, ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷರ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಬ್ಲಾಕ್ ಸಮಿತಿ ಅಧ್ಯಕ್ಷ ರಾಜನ್ ಪೆರಿಯ ರವರ ಮನೆ ಮೇಲೆ ದಾಳಿ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಳ್ಳುವಂತೆ ಮಾಡಿದೆ. ಮನೆಯಂಗಳದಲ್ಲಿದ್ದ ಕಾರನ್ನು ಹಾನಿಗೊಳಿಸಲಾಗಿದೆ. ಕಿಟಕಿ ಗಾಜುಗಳನ್ನು ಪುಡಿಗೈದಿರುವ ತಂಡವು ಮನೆಗೆ ಬೆಂಕಿ ಹಚ್ಚಿದ್ದು ವರಾಂಡದಲ್ಲಿದ್ದ ಪೀಠೋಪಕರಣ ಹಾಗೂ ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿವೆ. ರಾಜನ್ ಮತ್ತು ಕುಟುಂಬದವರು ಮನೆಯಲ್ಲಿದ್ದಾಗಲೇ ಈ ಘಟನೆ ನಡೆದಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಬಳಿಕ ನಡೆದ ಹರತಾಳದ ಸಂದರ್ಭದಲ್ಲಿ ಪರಿಸರದ ಹಲವು ಸಿಪಿಎಂ ಕಾರ್ಯಕರ್ತರ ಮಳಿಗೆಗಳು, ಮನೆಗಳು ಮತ್ತು ಕಚೇರಿಗಳನ್ನು ಹಾನಿಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಸಂಸದ ಪಿ.ಕರುಣಾಕರಣ್ ನೇತೃತ್ವದ ನಿಯೋಗ ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಡೆದಿದ್ದು, ಈ ಸಂದರ್ಭದಲ್ಲಿ ಘರ್ಷಣೆ ನಡೆದಿತ್ತು. ಈ ಬೆಳವಣಿಗೆ ಬಳಿಕ ಮುಖಂಡನ ಮನೆಗೆ ಬೆಂಕಿ ಹಚ್ಚಲಾಗಿದೆ.