ಹಿಂದೂ ಧರ್ಮ ಅವಹೇಳನ ಪುಸ್ತಕ ಮಾರಾಟ ಜಾಲ ಪತ್ತೆಯಾಗಿದೆ.
ಹಿಂದೂ ಧರ್ಮವನ್ನು ಅವಹೇಳನ ಮಾಡುವಂತಹ ಪುಸ್ತಕಗಳ ಮಾರಾಟ ಹಿನ್ನೆಲೆಯಲ್ಲಿ ರಾಯಚೂರಿನ ನೇತಾಜಿ ಠಾಣೆಯ ಪೊಲೀಸರು 8 ಜನರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಆಂಧ್ರದ ತಾಡಪತ್ರಿ ಮೂಲದ ಪ್ರಭುನಂದ ಯೋಗೀಶ್ವರ ಮಠದ ಪ್ರಭುನಂದ ಸ್ವಾಮಿಗಳು ಬರೆದ ಪುಸ್ತಕದಲ್ಲಿ ಹಿಂದೂ ಎನ್ನುವ ಪದಕ್ಕೆ ಅರ್ಥವೇ ಇಲ್ಲ. ಇದು ಅರ್ಥ ಹೀನ, ಜ್ಞಾನವಿಲ್ಲದ ಪದವೆಂದು ಪ್ರಚಾರ ಮಾಡಲಾಗಿತ್ತು. ಇಂತಹ ಪುಸ್ತಕ ಮಾರಾಟ ಬಗ್ಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ನೇತಾಜಿ ನಗರ ಠಾಣೆಯ ಪೊಲೀಸರು ಸ್ವಯಂ ತೆರಳಿ ಪುಸ್ತಕಗಳನ್ನು ಪರಿಶೀಲಿಸಿ 8 ಜನರನ್ನು ಬಂಧಿಸಿದ್ದರು.
ಬಂಧಿತರನ್ನು ತೆಲಂಗಾಣ ಮೂಲದ ವನ್ಪರ್ತಿಗೆ ಸೇರಿದ ಸುರೇಶಕುಮಾರ, ರಾಮು ಗೋಪಾಲ್, ಗುರುಮೂರ್ತಿ ವೆಂಕಯ್ಯ, ರವಿ ರಾಮುಲು, ರಾಯಚೂರಿನ ಗಿರಿ ಸುಬ್ಬಯ್ಯ, ಗದ್ವಾಲ್ ಜಯರಾಮ ನಾಯಕ, ಭೀರಯ್ಯ, ನಾರಾಯಣಪೇಟೆ ಮೂಲದ ಈಶ್ವರಯ್ಯ, ಕುರುಮಯ್ಯ, ಕ್ಯಾತನೂರು ಕೆ.ಎನ್.ಕೆ.ಕುಮಾರ, ರಾಮುಲು ಇವರನ್ನು ಬಂಧಿಸಲಾಗಿದೆ. ತಿಮ್ಮಾಪೂರು ಪೇಟೆಯ ಹನುಮಾನ್ ಚಿತ್ರಮಂದಿರ ಬಳಿ ಸೂಪರ್ ಟಾಟಾ ಏಸಿ ವಾಹನದಲ್ಲಿ ಪುಸ್ತಕ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಎಲ್ಲಾ ಬಂಧಿತರನ್ನು ತಹಶೀಲ್ದಾರರ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.