Select Your Language

Notifications

webdunia
webdunia
webdunia
webdunia

ದೇವಸ್ಥಾನದ ಪೂಜಾ ಕೈಂಕರ್ಯ ನೆರವೇರಿಸಲು ಮುಜಾವರ್ ನೇಮಕ

ದೇವಸ್ಥಾನದ ಪೂಜಾ ಕೈಂಕರ್ಯ ನೆರವೇರಿಸಲು ಮುಜಾವರ್ ನೇಮಕ
bangalore , ಗುರುವಾರ, 30 ಸೆಪ್ಟಂಬರ್ 2021 (20:16 IST)
ಬೆಂಗಳೂರು: ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠ ದೇವಸ್ಥಾನದ ಪೂಜಾ ಕೈಂಕರ್ಯ ನೆರವೇರಿಸಲು ಮುಜಾವರ್ ನೇಮಕ ಮಾಡಿ 2018ರ ಮಾ.19ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ದೇವಸ್ಥಾನದ ಪೂಜಾ ಕಾರ್ಯಗಳಿಗೆ ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನಿ ಅವರನ್ನು ನೇಮಕ ಮಾಡಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 2018ರಲ್ಲಿ ಆದೇಶ ಹೊರಡಿಸಿದ್ದರು. ಸರ್ಕಾರದ ಈ ಆದೇಶ ಪ್ರಶ್ನಿಸಿ, ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ, ಸರ್ಕಾರದ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ.
ಪ್ರಕರಣವನ್ನು ಹೊಸದಾಗಿ ಪರಿಗಣಿಸಿ, ಕಾನೂನಿನ ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ. ಉನ್ನತ ಮಟ್ಟದ ಸಮಿತಿಯ ವರದಿಯ ಬಗ್ಗೆ ಯಾವುದೇ ಉಲ್ಲೇಖ ಮಾಡಲಾಗಿಲ್ಲ ಎಂದು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ಏಕಸದಸ್ಯ ಪೀಠವು ತೀರ್ಪಿನಲ್ಲಿ ಹೇಳಿದೆ.
ಅರ್ಜಿ ಕುರಿತು ಸುದೀರ್ಘ ವಾದ  ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್ 2021ರ ಆಗಸ್ಟ್ ತಿಂಗಳಲ್ಲಿ ತೀರ್ಪು ಕಾಯ್ದಿರಿಸಿತ್ತು.
ಅರ್ಜಿ ವಿಚಾರಣಾ ಹಂತದಲ್ಲಿದ್ದಾಗಲೇ ಮಾ.19ರ ಆದೇಶ ಸಂಬಂಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ನೀಡಿದ್ದ ಮುಚ್ಚಳಿಕೆ ಆಧರಿಸಿ, ದತ್ತ ಪೀಠದ ಪೂಜಾ ವಿಧಿ ವಿಧಾನದ ಬಗ್ಗೆ ಯಾವುದೇ ಆತುರದ ಕ್ರಮಕ್ಕೆ ಮುಂದಾಗದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ಈ ಆದೇಶವನ್ನು ಕಾಲ ಕಾಲಕ್ಕೆ ವಿಸ್ತರಿಸಿಕೊಂಡು ಬಂದಿತ್ತು.
ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದ ಉನ್ನತಮಟ್ಟದ ಸಮಿತಿ ನೀಡಿರುವ ವರದಿ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಆ ವರದಿ ಆಧರಿಸಿ ರಾಜ್ಯ ಸರ್ಕಾರ ಮುಜಾವರ್ ನೇಮಕ ಮಾಡಿದೆ. ಹಿಂದೂಗಳ ಪೂಜಾಸ್ಥಳದ ಧಾರ್ಮಿಕ ಆಚರಣೆಗಳನ್ನು ಮುಜಾವರ್‌ಗಳು ನಡೆಸಿಕೊಡಬೇಕು ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ನಿರ್ಧಾರ ಹಿಂದೂಗಳ ಭಾವನೆಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಮುಜರಾಯಿ ಇಲಾಖೆ ಅಧೀನದಲ್ಲಿರುವ ದತ್ತಾತ್ರೇಯ ಪೀಠದಲ್ಲಿ ಹಿಂದೂ-ಮುಸ್ಲಿಂ ರೀತ್ಯ ಪೂಜಾ ಕೈಂಕರ್ಯ ನೆರವೇರಿಸಿಕೊಂಡು ಬರಲಾಗುತ್ತಿತ್ತು. ಆದರೆ, ಮುಜಾವರ್ ನೇಮಕದಿಂದ ಗೊಂದಲ ಏರ್ಪಟ್ಟಿತ್ತು.
ಇದೀಗ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ಪೀಠ ಮುಜಾವರ್ ನೇಮಕ ಆದೇಶವನ್ನು ರದ್ದುಗೊಳಿಸಿದ್ದು, ದತ್ತಪೀಠದ ಪೂಜಾ ವಿಧಿ-ವಿಧಾನ ಸಂಬಂಧ ಕಾನೂನಿನ ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಆದೇಶ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಂಜಾಬ್​ ನಂತ್ರ ಇದೀಗ ಛತ್ತೀಸ್ ಗಢದಲ್ಲಿ ಸಿಎಂ ಬದಲಾವಣೆ ಆಗುತ್ತಾರೆ ಅನ್ನೋ ಗುಮಾನಿ