Publish Date: Thu, 28 May 2020 (17:00 IST)
Updated Date: Thu, 28 May 2020 (20:37 IST)
ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಹಿರಿಯರು ಮತ್ತು ಜೆಡಿಎಸ್ ಮುಖಂಡರ ಜೊತೆ ಮಾತುಕತೆ ಮಾಡುತ್ತಾರೆ.
ಆ ನಂತರ ಈ ಮೈತ್ರಿ ಕುರಿತು ತಿರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹಾವೇರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ, ಇಷ್ಟು ದಿನ ನಾವು ಕಾಂಗ್ರೆಸ್ ಎಂದರೆ ಮಾಸ್ ಬೇಸ್ ಪಕ್ಷ ಎಂಬ ಭ್ರಮೆಯಲ್ಲಿ ಕಾಲ ಕಳೆದಿದ್ದೇವೆ. ಆ ಯೋಚನೆಯಿಂದ ಹೊರಬಂದು ಕೆಡರ್ ಬೇಸ್ ಮೂಲಕ ಪಕ್ಷ ಸಂಘಟಿಸಬೇಕು. ದೇಶದ ಇತಿಹಾಸ, ಕಾಂಗ್ರೆಸ್ ಪಕ್ಷ ಹಿನ್ನೆಲೆಯನ್ನು ಮರೆಮಾಚಿ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಪಕ್ಷದ ಮುಖವಾಡ ಕಳಚುವ ಮಟ್ಟಿಗೆ ಪಕ್ಷದ ಕಾರ್ಯಕರ್ತರನ್ನು ನಾವು ತಯಾರಿಸಬೇಕಾಗಿದೆ ಎಂದರು.
ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಪಕ್ಷವನ್ನು ಸಂಘಟಿಸಬೇಕಾಗಿದೆ. ಸಾಮಾಜಿಕ ನ್ಯಾಯ ತತ್ವವನ್ನು ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಶ್ರಮಿಸಬೇಕಾಗಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ವಿಚಾರ ಸಂಕಿರಣಗಳನ್ನು, ತರಬೇತಿಗಳನ್ನು ನಡೆಸುವ ಮೂಲಕ ಪ್ರಬುದ್ಧ ಕಾರ್ಯಕರ್ತರ ಪಡೆಯನ್ನು ಕಟ್ಟಬೇಕಾಗಿದೆ.