Publish Date: Fri, 28 Aug 2026 (15:48 IST)
Updated Date: Fri, 28 Aug 2026 (15:53 IST)
ಧಾರವಾಡ: ಜಿ.ಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿದ್ದ ಶಾಸಕ ವಿನಯ್ ಕುಲಕರ್ಣಿ ಅವರು 6 ವರ್ಷಗಳ ಬಳಿಕ ಧಾರವಾಡಕ್ಕೆ ಪ್ರವೇಶ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮನ ದರ್ಶನ ಪಡೆದು ಅಲ್ಲಿಂದ ನೇರವಾಗಿ ಧಾರವಾಡದ ಪ್ರಸಿದ್ಧ ಮುರುಘಾಮಠಕ್ಕೆ ಬಂದ ಶಾಸಕ ವಿನಯ್ ಅವರನ್ನು ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತ ಮಾಡಿದರು.
ಮುರುಘೇಂದ್ರ ಮಹಾಶಿವಯೋಗಿಗಳ ಹಾಗೂ ಮೃತ್ಯುಂಜಯಪ್ಪಗಳ ಗದ್ದುಗೆಗೆ ಶಾಸಕ ವಿನಯ್ ಪೂಜೆ ಸಲ್ಲಿಸಿದರು. ಅವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ, ಮಕ್ಕಳಾದ ವೈಶಾಲಿ, ದೀಪಾಲಿ ಹಾಗೂ ಹೇಮಂತ್ ಪೂಜೆಯಲ್ಲಿ ಭಾಗಿಯಾಗಿದ್ದರು.
ಇನ್ನೂ ವಿನಯ್ ಕುಲಕರ್ಣಿ ಅವರು ಈ ಸಂದರ್ಭದಲ್ಲಿ ಯಾವುದೇ ಜಯಘೋಷಣೆಗಳನ್ನು ಹಾಕಬಾರದು ಹಾಗೂ ಮೆರವಣಿಗೆ ಮಾಡಬಾರದು ಎಂಬ ಷರತ್ತನ್ನು ಹಾಕಿದ್ದರು.
ನಂತರ ಶಿವಗಿರಿಯಲ್ಲಿರುವ ತಮ್ಮ ಮನೆಗೆ ಆಗಮಿಸಿದ ವಿನಯ್ ಅವರನ್ನು ಬೆಂಬಲಿಗರು ಸಂತಸದಿಂದ ಬರಮಾಡಿಕೊಂಡರು.
ರಕ್ಷಾ ಬಂಧನದ ದಿನವೇ ವಿನಯ್ ಅವರು ಧಾರವಾಡಕ್ಕೆ ಬಂದಿದ್ದರಿಂದ ಅನೇಕರು ವಿನಯ್ ಅವರಿಗೆ ರಾಕಿ ಕಟ್ಟಿದರು. ಈ ವೇಳೆ ಮಾತನಾಡಿದ ಶಾಸಕ ವಿನಯ್ ಕಾರ್ಯಕರ್ತರಿಗೆ ಮತ್ತು ಬೆಂಬಲಿಗರಿಗೆ ಧನ್ಯವಾದ ತಿಳಿಸಿದರು. ಅಲ್ಲದೇ ಕ್ಷೇತ್ರ ಅಭಿವೃದ್ಧಿ ಕುರಿತು ಮಾತನಾಡಿದರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ