ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿದ್ದ ವೇದಿಕೆಯಲ್ಲೇ ಹೈಡ್ರಾಮಾ ನಡೆದ ಬೆನ್ನಲ್ಲೇ ಬಿಜೆಪಿ ಶಾಸಕ ಮುನಿರತ್ನ ಆರ್‌ಎಸ್ ಎಸ್ ಸಮವಸ್ತ್ರದಲ್ಲೇ ಧರಣಿ ಕುಳಿತರು.
ಬೆಂಗಳೂರು ನಡಿಗೆ ಕಾರ್ಯಕ್ರಮದ ಪ್ರಯುಕ್ತ ಇಂದು ಮತ್ತಿಕೆರೆಯ ಜೆಪಿ ಪಾರ್ಕ್ನಲ್ಲಿ ಶಿವಕುಮಾರ್ ಜನರೊಂದಿಗೆ ಸಂವಾದ ನಡೆಸಿದರು. ಆಹ್ವಾನ ಇಲ್ಲದೆ ಸಭೆಗೆ ಬಂದಿದ್ದ ಮುನಿರತ್ನ ಅವರನ್ನು ಡಿಕೆ ಶಿವಕುಮಾರ್ ವೇದಿಕೆ ಕರೆದರು. ಆಗ ಡಿಸಿಎಂ ಹೇಯ್, ಕಪ್ಪು ಟೋಪಿ ಎಂಎಲ್ಎ ಬಾರಯ್ಯ ಎಂದು ಕರೆದರು. ಆದರೆ, ಅದಕ್ಕೆ ಒಪ್ಪದ ಮುನಿರತ್ನ ನಾನು ಜನರ ಮಧ್ಯದಲ್ಲೇ ಕೂರುತ್ತೇನೆ ಎಂದು ಹೇಳಿದರು.
ಇದಾದ ನಂತರ ನಿರೂಪಕರು ಸ್ವಾಗತ ನೀಡುತ್ತಿದ್ದಂತೆ ವೇದಿಕೆಗೆ ಬಂದ ಮುನಿರತ್ನ ಸರ್ಕಾರದ ವಿರುದ್ಧ ಹರಿಹಾಯ್ದರು. ಬೆಂಗಳೂರು ನಡಿಗೆ ಸರ್ಕಾರದ ಕಾರ್ಯಕ್ರಮವಾದರೂ ಶಾಸಕನಾದ ನನಗೆ ಆಹ್ವಾನ ನೀಡದೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು. ಈ ಕಾರ್ಯಕ್ರಮದಲ್ಲೆಲ್ಲೂ ಶಾಸಕನ ಒಂದು ಫೋಟೋ ಕೂಡ ಹಾಕಿಲ್ಲ, ನನಗೆ ಆಹ್ವಾನ ನೀಡಿಲ್ ಎಂದು ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಮುನಿರತ್ನ ಬೆಂಬಲಿಗರು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ವೇದಿಕೆಯಲ್ಲೇ ಗಲಾಟೆ ನಡೆಸಿದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರಿಂದಾಗಿ ಹೈಡ್ರಾಮಾ ಸೃಷ್ಟಿಯಾಯಿತು. ರಾಜಕೀಯ ಮಾಡಲು ಇಲ್ಲಿಗೆ ಬರಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ಬೆಂಬಲಿಗರಿಗೆ ಎಚ್ಚರಿಕೆ ನೀಡಿದರು. ಕಾರ್ಯಕರ್ತರು ಪರಸ್ಪರ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಇದರ ಬೆನ್ನಲ್ಲೇ ಮುನಿರತ್ನ ಧರಣಿ ನಡೆಸಿದರು.
ಈ ಬಗ್ಗೆ ಶಿವಕುಮಾರ್ ಪ್ರತಿಕ್ರಿಯಿಸಿ, ಸ್ಥಳೀಯ ಶಾಸಕರಿಗೆ ತಾಳ್ಮೆ ಇಲ್ಲ. ಕಾರ್ಯಕ್ರಮ ಹಾಳು ಮಾಡಲೆಂದೇ ಆಗಮಿಸಿದ್ದರು. ಇಂತವರನ್ನು ಗೆಲ್ಲಿಸಿದ್ದು ನಿಮ್ಮ ತಪ್ಪು. ಮುಂದೆಯಾದರೂ ಸರಿಪಡಿಸಿಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.
ಇದೇನು ಸರ್ಕಾರದ ಶಿಲಾನ್ಯಾಸ ಮಾಡುವ ಕಾರ್ಯಕ್ರಮ ಅಲ್ಲ. ಇದು ಜನರ ಸಮಸ್ಯೆ ಆಲಿಸುವ ಕಾರ್ಯಕ್ರಮ. ಎಲ್ಲರಿಗೆ ಏನು ಗೌರವ ಕೊಡಬೇಕು ಅದು ಕೊಟ್ಟಿದ್ದೇವೆ ಎಂದು ತಿರುಗೇಟು ನೀಡಿದರು.