ರಾಯಚೂರು: ಜೆಡಿಎಸ್ ಪಕ್ಷದ ಶಾಸಕಿ ಕರೆಮ್ಮಾ ನಾಯಕ್ ಅವರು ಪ್ರಯಾಣಿಸುತ್ತಿದ್ದ ಕಾರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೊಲಪಲ್ಲಿ ಬಳಿ ಅಪಘಾತ ಸಂಭವಿಸಿದೆ.
ಮುಂದೆ ಹೋಗುತ್ತಿದ್ದ ಕಾರಿಗೆ ಶಾಸಕಿ ಇದ್ದ ಕಾರು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಕರೆಮ್ಮಾ ನಾಯಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದೇವದುರ್ಗದಿಂದ ಹುಬ್ಬಳ್ಳಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶಾಸಕಿ ತೆರಳಿದ್ದಾರೆ.
ಶಾಸಕರು ತೆರಳುತ್ತಿದ್ದ ವೇಳೆ ಕಾರಿನ ಮುಂಬದಿ ಇದ್ದ ಮತ್ತೊಂದು ಕಾರಿಗೆ ನಾಯಿ ಅಡ್ಡ ಬಂದಿದೆ. ನಾಯಿ ತಪ್ಪಿಸಲು ಕಾರಿನ ಚಾಲಕ ಯತ್ನಿಸಿದ್ದು, ರಸ್ತೆ ಪಕ್ಕದ ಗುಡ್ಡಕ್ಕೆ ಕಾರು ಡಿಕ್ಕಿಯಾಗಿದೆ. ಹಿಂದೆಯೇ ಶಾಸಕರಿದ್ದ ಕಾರು ಕೂಡ ನಿಯಂತ್ರಣ ಕಳೆದುಕೊಂಡು ಅಪಘಾತ ನಡೆದಿದೆ.
ಘಟನೆಯಲ್ಲಿ ಜಖಂಗೊಂಡಿರುವ ಎರಡು ಕಾರುಗಳು ಕೂಡ ಕರೆಮ್ಮಾ ನಾಯಕ್ ಅವರಿಗೆ ಸೇರಿದ್ದು ಎನ್ನಲಾಗಿದ್ದು, ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಶಾಸಕಿ ಕರೆಮ್ಮಾ ನಾಯಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಸ್ಥಳಕ್ಕೆ ಲಿಂಗಸ್ಗೂರು ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಸ್ಥಳೀಯ ತಹಶೀಲ್ದಾರ್ ಭೇಟಿ ನೀಡಿದರು.