ಬೆಂಗಳೂರು: ತಮ್ಮ ಸ್ವ ಕ್ಷೇತ್ರದಲ್ಲಿ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವನ್ನಪ್ಪಿದ ಬೆನ್ನಲ್ಲೇ ಶಾಸಕ ಜಮೀರ್ ಅಹ್ಮದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಬೆನ್ನಲ್ಲೇ ಸ್ಥಳೀಯರು ಶಾಸಕ ಜಮೀರ್ ಅಹ್ಮದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 20 ವರ್ಷಗಳಿಂದ ಜಮೀರ್ ನಮ್ಮ ಕ್ಷೇತ್ರದ ಶಾಸಕರು. ಆದರೆ ಇದುವರೆಗೆ ನಮ್ಮ ಏರಿಯಾಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಪಕ್ಕದ ಮುಸ್ಲಿಮರ ಏರಿಯಾಗೆ ಎಲ್ಲಾ ಮಾಡ್ತಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು.
ಇದೀಗ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದು ಘಟನೆ ಬಗ್ಗೆ ವಿವರಣೆ ಪಡೆದುಕೊಂಡಿದ್ದಾರೆ. ಈ ವೇಳೆ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ್ದಾರೆ. ಮಹಿಳೆಯರ ಗುಂಪು ಜಮೀರ್ ಅಹ್ಮದ್ ಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ನೀರಿನ ವ್ಯವಸ್ಥೆಯಿಲ್ಲ, ಕಸ ವಿಲೇವಾರಿ ವ್ಯವಸ್ಥೆಯಿಲ್ಲ. ಎಲ್ಲಾ ಮಾಡಿಕೊಡಿ ಎಂದು ಕೇಳಿದ್ದಾರೆ.
ಇದಕ್ಕೆ ಜಮೀರ್ ಅಹ್ಮದ್ ಕೂಡಾ ಸ್ಪಂದಿಸಿದ್ದು ಎಲ್ಲಾ ಮಾಡೋಣ ಎಂದಿದ್ದಾರೆ. ಇನ್ನು, ಸಂತ್ರಸ್ತ ಮಹಿಳೆಯ ಕುಟುಂಬಸ್ಥರನ್ನೂ ಕರೆದು ಸಾಂತ್ವನ ಹೇಳಿದ್ದಾರೆ. ಎಲ್ಲಾ ಸಮಸ್ಯೆಗಳನ್ನೂ ಶೀಘ್ರದಲ್ಲೇ ಬಗೆಹರಿಸಿಕೊಡುವುದಾಗಿ ಹೇಳಿದ್ದಾರೆ.