ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಾಗರಿಕರಿಗೆ ಬಸ್, ಮೆಟ್ರೋ ಬಳಿಕ ಈಗ ಆಟೋ ದರವೂ ಏರಿಕೆಯಾಗಲಿದ್ದು, ಅಕ್ಷರಶಃ ಶಾಕ್ ಆಗಲಿದೆ. ಎಷ್ಟು ಏರಿಕೆಯಾಗಲಿದೆ ಇಲ್ಲಿದೆ ಡೀಟೈಲ್ಸ್.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ಮೆಟ್ರೋ ಕೂಡಾ ಪ್ರಯಾಣ ದರವನ್ನು ದುಪ್ಪಟ್ಟು ಮಾಡಿತ್ತು. ಹೀಗಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯೇ ಇಳಿಮುಖವಾಗಿದೆ.
ಇದೀಗ ಆಟೋ ಚಾಲಕರ ಸರದಿ. ಇಂದು ಸಾರಿಗೆ ಇಲಾಖೆಯೊಂದಿಗೆ ಆಟೋ ಚಾಲಕರ ಸಂಘ ಸಭೆ ನಡೆಸಲಿದೆ. ಈ ಸಭೆಯಲ್ಲಿ ಆಟೋ ದರ ಪರಿಷ್ಕರಣೆ ತೀರ್ಮಾನವಾಗಲಿದೆ. ಹೀಗಾಗಿ ಮಿನಿಮಮ್ ಆಟೋ ದರ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.
ಸದ್ಯಕ್ಕೆ ಆಟೋ ದರ ಮಿನಿಮಮ್ 2 ಕಿ.ಮೀ. ದೂರಕ್ಕೆ 30 ರೂ.ಗಳಷ್ಟಿದೆ. ಆದರೆ ಯಾರೂ ಮೀಟರ್ ಹಾಕಲ್ಲ. ಹೇಳಿದ್ದೇ ದರ ಎನ್ನುವಂತಾಗಿದೆ. 2 ಕೀ.ಮೀ. ದೂರ ಸಂಚರಿಸಲು 50 ರೂ.ವರೆಗೆ ಕೇಳುತ್ತಿದ್ದಾರೆ. ಇನ್ನೀಗ ಅದೂ ದುಬಾರಿಯಾಗಲಿದೆ. ಈಗಾಗಲೇ ಓಲಾ, ಉಬರ್, ರಾಪಿಡ್ ನಂತಹ ಕ್ಯಾಬ್ ಆಟೋಗಳ ದರವೂ ಯಾವುದೇ ಸೂಚನೆಯಿಲ್ಲದೇ ದುಪ್ಪಟ್ಟಾಗಿದೆ.
ಮೂಲಗಳ ಪ್ರಕಾರ ಮಿನಿಮಮ್ ದರ ಇನ್ನೀಗ 40 ರೂ.ಗೆ ಏರಿಕೆಯಾಗುವ ಸಾಧ್ಯತೆಯಿದೆ. 2021 ರಲ್ಲಿ ಕೊನೆಯದಾಗಿ ಆಟೋ ದರ ಹೆಚ್ಚಳವಾಗಿತ್ತು. ಬಸ್, ಮೆಟ್ರೋ, ಡೀಸೆಲ್, ಪೆಟ್ರೋಲ್ ದರ ಏರಿಕೆಯಾದ ಹಿನ್ನಲೆಯಲ್ಲಿ ಆಟೋ ದರವನ್ನೂ ಹೆಚ್ಚಳ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.