ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಮಾಡುವ ವ್ಯಕ್ತಿ ಶೂ ಧರಿಸಿರುವ ಕುರಿತು ವೀರಗಾಸೆ ಕಲಾವಿದರು ಆಕ್ರೋಶಗೊಂಡಿದ್ರು. ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಚಿವ ಸುನೀಲ್ ಕುಮಾರ್, ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕ್ರತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಬರೆದುಕೊಂಡಿದ್ದಾರೆ. ಹೆಡ್ಬುಷ್ ಸಿನಿಮಾ ವಿರುದ್ಧ ಪರೋಕ್ಷವಾಗಿ ಕಿಡಿಕಾರಿರುವ ಸುನಿಲ್ ಕುಮಾರ್, ಸಿನಿಮಾ ಮಾಡಿದವರು ಮರುಚಿಂತನೆ ಮಾಡಿ ಎಂದು ವಿನಂತಿಸಿದ್ದಾರೆ. ಕರಗ ಇರಬಹುದು, ಅಥವಾ ಯಾವುದೇ ಜನಪದ ಕಲೆಯಾದರೂ ಅದರ ಗೌರವಕ್ಕೆ ಚ್ಯುತಿ ತರಬಾರದು ಎಂದು ಹೇಳಿದ್ದಾರೆ.