ಬೆಂಗಳೂರು: ಅನ್ನಭಾಗ್ಯ ಯೋಜನೆ ಹಣ ವಿಳಂಬವಾಗುತ್ತಿರುವುದರ ಬಗ್ಗೆ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆಎಚ್ ಮುನಿಯಪ್ಪ ಬಿಪಿಎಲ್ ಕಾರ್ಡ್ ದಾರರಿಗೆ ಮಹತ್ವದ ಎಚ್ಚರಿಕೆ ಕೊಟ್ಟಿದ್ದಾರೆ.
ಈಗಾಗಲೇ ಪಂಚಾಯತ್ ಮಟ್ಟದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ನಡೆಯುತ್ತಿದೆ. ಇದು ನಿಧಾನವಾಗಿ ನಡೆಯುತ್ತಿದೆ. ಸರಿಯಾಗಿ ಪರಿಶೀಲಿಸಿ ಕೆಲಸ ನಡೆಯಬೇಕು. ಅದಕ್ಕಾಗಿ ಸ್ವಲ್ಪ ಸಮಯ ಹಿಡಿಯುತ್ತಿದೆ ಎಂದಿದ್ದಾರೆ.
ಇನ್ನು, ಅರ್ಹತೆಯಿಲ್ಲದಿದ್ದರೂ ಬಿಪಿಎಲ್ ಕಾರ್ಡ್ ಹೊಂದಿರುವ ಶ್ರೀಮಂತರಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಎಪಿಎಲ್ ಕಾರ್ಡ್ ನಲ್ಲಿರಬೇಕಾದವರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ತಕ್ಷಣವೇ ಹಿಂದಿರುಗಿಸಿ ಎಂದು ಸಚಿವರು ಹೇಳಿದ್ದಾರೆ. ನಾವು ಸ್ವಲ್ಪ ಸಮಯ ಕೊಡುತ್ತೇವೆ. ಅದರೊಳಗೆ ಕೊಡದೇ ಇದ್ದರೆ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಸರ್ಕಾರದ ಯೋಜನೆಗಳು ಬಡವರಿಗೆ, ಅರ್ಹರಿಗೆ ತಲುಪುವಂತಾಗಬೇಕು. ಅದಕ್ಕೋಸ್ಕರ ಈ ಮನವಿ ಮಾಡುತ್ತಿದ್ದೇವೆ. ಈಗಾಗಲೇ ಪರಿಷ್ಕರಣೆ ಕಾರ್ಯಕ್ರಮ ಶುರು ಮಾಡಿದ್ದೆವು. ಈ ಸಂದರ್ಭದಲ್ಲಿ ಕೆಲವರು ಅಕಸ್ಮಾತ್ತಾಗಿ ಅರ್ಹತೆಯಿದ್ದರೂ ಬಿಪಿಎಲ್ ಕಾರ್ಡ್ ಪಟ್ಟಿಯಿಂದ ಹೊರಬಿದ್ದರು. ಆ ತಪ್ಪುಗಳನ್ನು ತಿದ್ದಿಕೊಳ್ಳಲು ಸಮಯ ಹಿಡಿಯಿತು. ಈಗ ಬಿಪಿಎಲ್ ಕಾರ್ಡ್ ಹೊಂದಿರುವ ಎಪಿಎಲ್ ಕಾರ್ಡ್ ದಾರರು ಯಾರಿದ್ದಾರೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ನೀವಾಗಿಯೇ ಬಿಟ್ಟುಕೊಟ್ಟರೆ ಒಳ್ಳೆಯದು. ಇಲ್ಲದೇ ಹೋದರೆ ಪೆನಾಲ್ಟಿ ಹಾಕಲೇಬೇಕಾಗುತ್ತದೆ ಎಂದಿದ್ದಾರೆ.