ಬೆಂಗಳೂರು: ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಸಚಿವ ಕೆಎಚ್ ಮುನಿಯಪ್ಪ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.
ಕಳೆದ ನಾಲ್ಕೈದು ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಅಕ್ಕಿಯ ಬಾಬ್ತು ನೀಡಬೇಕಾದ ಹಣ ನೀಡುತ್ತಿಲ್ಲ ಎಂದು ಆರೋಪಗಳು ಬಂದಿದ್ದವು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಈಗ ಹಣದ ಬದಲು ಅಕ್ಕಿಯನ್ನೇ ವಿತರಿಸಲು ಮುಂದಾಗಿದೆ. ಮೊನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದರು. ಹಣ ನೀಡುವ ಬದಲು ಅಕ್ಕಿ ನೀಡಿದರೆ ರಾಜ್ಯ ಸರ್ಕಾರಕ್ಕೆ 200 ಕೋಟಿ ರೂ.ಗಳಷ್ಟು ಹಣ ಉಳಿತಾಯವಾಗುತ್ತದೆ ಎಂದಿದ್ದರು.
ಇದೀಗ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಅನ್ನಭಾಗ್ಯ ಅಕ್ಕಿ ವಿತರಿಸುವ ಬಗ್ಗೆ ಮುನಿಯಪ್ಪ ಮಹತ್ವದ ಮಾಹಿತಿ ನೀಡಿದ್ದಾರೆ. ಈ ಎರಡು ತಿಂಗಳ ಅನ್ನಭಾಗ್ಯ ಅಕ್ಕಿಯನ್ನು ಒಟ್ಟಿಗೇ ವಿತರಿಸುವುದಾಗಿ ಸಚಿವ ಮುನಿಯಪ್ಪ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ವಿತರಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರ ಅಕ್ಕಿ ನೀಡಲು ಒಪ್ಪಿದೆ. ಹೀಗಾಗಿ ಪ್ರತೀ ಕೆ.ಜಿ.ಗೆ 22.5 ರೂ.ನಂತೆ ಪಾವತಿಸಿ ಅಕ್ಕಿ ಖರೀದಿ ಮಾಡಲಾಗುತ್ತದೆ. ಈ ಯೋಜನೆಯಡಿ ಪ್ರತೀ ತಿಂಗಳು 2.10 ಲಕ್ಷ ಟನ್ ಅಕ್ಕಿ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.