ಕೊಡಗು: ಸೇನಾ ವಾಹನವು ಕಂದಕಕ್ಕೆ ಉರುಳಿ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ರಾಜ್ಯದ ಮೂರು ಯೋಧರು ಸೇರಿ ಐವರು ಮೃತಪಟ್ಟಿದ್ದರು. ಅದೇ ಘಟನೆಯಲ್ಲಿ ಗಾಯಗೊಂಡ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರದ ಬಳಿಯ ಮಾಲಂಬಿ ಗ್ರಾಮದ ಯೋಧ ಪಿ.ಪಿ.ದಿವಿನ್ ಅವರ ಸ್ಥಿತಿ ಗಂಭೀರವಾಗಿದೆ.
ದಿವಿನ್ ಪೋಷಕರು ಪುತ್ರನನ್ನು ನೋಡಲು ಜಮ್ಮವಿನ ಉದಮ್‌ಪುರಕ್ಕೆ ತೆರಳಿದ್ದಾರೆ. ಗ್ರಾಮದ ಪಳಂಗೋಟು ಪ್ರಕಾಶ್ ಮತ್ತು ಜಯ ದಂಪತಿಯ ಏಕೈಕ ಪುತ್ರ ದಿವಿನ್ 10 ವರ್ಷಗಳ ಹಿಂದೆ ಭೂ ಸೇನೆಗೆ ಸೇರಿದ್ದರು.
ದಿವಿನ್ ಅವರಿಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದು, ಫೆಬ್ರವರಿಯಲ್ಲಿ ಮದುವೆ ಸಮಾರಂಭ ನಿಗದಿಯಾಗಿದೆ.
ವೈದ್ಯರ ಜೊತೆ ಮಡಿಕೇರಿ ಶಾಸಕ ಮಂಥರ್ ಗೌಡ ಮಾತುಕತೆ ನಡೆಸಿ ಮಾಹಿತಿ ಪಡೆದರು. ತನ್ನ ಕ್ಷೇತ್ರದ ಸೈನಿಕನ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಶಾಸಕ ಮಂಥರ್ ಗೌಡ, ದೂರವಾಣಿ ಮೂಲಕ ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ.<>