ಬೆಂಗಳೂರು: ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದರಿಂದ ನಮಗೆ ನ್ಯಾಯ ಸಿಕ್ಕಂತಾಗಿದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಮೇಕೆದಾಟು, 'ನಮ್ಮ ನೀರು, ನಮ್ಮ ಹಕ್ಕು' ಯೋಜನೆ. ನಾವು ತಮಿಳುನಾಡಿಗೆ ಯಾವುದೇ ರೀತಿಯಲ್ಲೂ ಅಡ್ಡಿ ಮಾಡುತ್ತಿಲ್ಲ. ಈ ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಲಾಭವಾಗಲಿದೆ. ಅರ್ಜಿಯನ್ನು ವಜಾಗೊಳಿಸುವ ಮೂಲಕ ರಾಜ್ಯದ ಜನರ ಪ್ರಾರ್ಥನೆ, ಜನರ ಕಷ್ಟಕ್ಕೆ ನ್ಯಾಯಾಲಯ ಸ್ಪಂದಿಸಿದೆ ಎಂದರು.
ಇನ್ನೂ ನ್ಯಾಯಾಲಯದ ತೀರ್ಮಾನದಂತೆ ತಮಿಳುನಾಡು ತನ್ನ ಪಾಲಿನ ನೀರನ್ನು ಪಡೆಯಲಿದೆ. ಹೀಗಾಗಿ ನಾವು ಈ ಯೋಜನೆ ಮುಂದುವರಿಸಿಕೊಂಡು ಹೋಗುತ್ತೇವೆ. ಈ ಯೋಜನೆಯನ್ನು ನಮ್ಮ ನೆಲದಲ್ಲಿ, ನಮ್ಮ ಹಣದಲ್ಲಿ ಮಾಡಲಾಗುತ್ತಿದೆ. ನೀರಿನ ಕೊರತೆ ಉಂಟಾದಾಗ ತಮಿಳುನಾಡಿಗೆ ನೀರು ಹರಿಸಲು ಈ ಸಮತೋಲಿತ ಅಣೆಕಟ್ಟೆ ನೆರವಾಗಲಿದೆ. ಇದು ಬೆಂಗಳೂರಿಗರ ಗೆಲುವು. ಇನ್ನೂ ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಂದ ಬರುವ ಜನರಿಗೂ ನೀರು ಒದಗಿಸಲಾಗುವುದು. ಇನ್ನಾದರೂ ಈ ಯೋಜನೆಗೆ ಸಹಕಾರ ನೀಡಿ ಎಂದು ತಮಿಳುನಾಡಿಗೆ ಮನವಿಯನ್ನು ಮಾಡಿದರು.
ಸಹಕಾರ ನೀಡದೇ ಸಿಡಬ್ಲ್ಯೂಸಿ ಮುಂದೆ ಬೇರೆ ಆಯ್ಕೆಯೇ ಇಲ್ಲ
'ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಈ ಯೋಜನೆಗೆ ಸಹಕಾರ ನೀಡುವುದೇ' ಎಂದು ಸುದ್ದಿಗಾರರು ಕೇಳಿದಾಗ, “ಈ ಯೋಜನೆಗೆ ಅನುಮತಿ ನೀಡದೇ ಬೇರೆ ಆಯ್ಕೆ ಅವರ ಮುಂದೆ ಇಲ್ಲ. ಅವರು ನ್ಯಾಯ ಒದಗಿಸಿ ಕೊಡಲೇಬೇಕು” ಎಂದು ತಿಳಿಸಿದರು.