ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ನಂತರ ಕಡಲನಗರಿ ಮಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದೀಗ ರಾತ್ರಿ 9 ರ ನಂತರ ಎಲ್ಲವೂ ಬಂದ್ ಮಾಡಲಾಗುತ್ತಿದೆ.
ಬಜ್ಪೆಯಲ್ಲಿ ನಾಲ್ಕು ದಿನಗಳ ಹಿಂದೆ ನಡೆದಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಭಾರೀ ಸದ್ದು ಮಾಡಿತ್ತು. ಹಿಂದೂ ಕಾರ್ಯಕರ್ತರು ದಕ್ಷಿಣ ಕನ್ನಡ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹತ್ಯೆಗೆ ಪ್ರತೀಕಾರವಾಗಿ ಕೆಲವು ಮುಸ್ಲಿಮರ ಮೇಲೂ ದಾಳಿಯಾಗಿತ್ತು.
ಇದರ ಬೆನ್ನಲ್ಲೇ ಹಿಂದೂ ಮುಖಂಡ ಶರಣ್ ಪಂಪ್ವೆಲ್ ಸೇರಿದಂತೆ ಕೆಲವರ ಹತ್ಯೆ ಮಾಡುವುದಾಗಿಯೂ ಬೆದರಿಕೆಗಳು ಬಂದಿದ್ದವು. ಹೀಗಾಗಿಯೇ ಈಗ ಮಂಗಳೂರು ಬೂದಿ ಮುಚ್ಚಿದ ಕೆಂಡದಂತಿದೆ. ಮತ್ತೊಂದು ಅನಾಹುತವಾಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಇದಕ್ಕಾಗಿ ರಾತ್ರಿ 9.30 ರ ನಂತರ ನಗರದಲ್ಲಿ ಅಂಗಡಿಗಳನ್ನು ಕ್ಲೋಸ್ ಮಾಡಲಾಗುತ್ತಿದೆ. ನಗರದಲ್ಲಿ ಹೆಚ್ಚು ಗುಂಪು ಗುಂಪಾಗಿ ಜನರು ಸೇರದಂತೆ, ಗಲಾಟೆಗಳಾಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಇನ್ನು ಕೆಲವು ದಿನ ಮಂಗಳೂರಿನಲ್ಲಿ ಇದೇ ವಾತಾವರಣವಿರಲಿದೆ.