ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಮುಸ್ಲಿಂ ಧರ್ಮದ ಹೆಡ್ ಕಾನ್ಸ್ ಟೇಬಲ್ ಒಬ್ಬರ ಕೈವಾಡವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ರಶೀದ್ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೊದಲಿನಿಂದಲೂ ತಮ್ಮ ಮಗನ ಹತ್ಯೆಯಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ ಎಂದು ಸುಹಾಸ್ ಶೆಟ್ಟಿ ಕುಟುಂಬಸ್ಥರು ಆರೋಪಿಸಿದ್ದರು.
ಘಟನೆ ನಡೆಯುವ ಒಂದು ವಾರದ ಹಿಂದಷ್ಟೇ ಬಜ್ಪೆ ಠಾಣೆಯ ರಶೀದ್ ಠಾಣೆಗೆ ಕರೆಸಿ ನೀನು ಯಾವುದೇ ಗುಂಪು ಕಟ್ಟಿಕೊಳ್ಳಬಾರದು, ಆಯುಧ ಇಟ್ಟುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಇದೆಲ್ಲವೂ ಪೂರ್ವ ನಿಯೋಜಿತವಾಗಿತ್ತು ಎಂಬುದು ಕುಟುಂಬಸ್ಥರ ಆರೋಪ.
ಸುಹಾಸ್ ಶೆಟ್ಟಿ ಚಲನವಲನಗಳನ್ನು ರಶೀದ್ ಗಮನಿಸಿ ಹಂತಕರಿಗೆ ಮಾಹಿತಿ ನೀಡಿದ್ದಾರೆ ಎಂಬ ಆರೋಪವಿದೆ. ಇದೀಗ ಸುಹಾಸ್ ಹತ್ಯೆ ವಿಚಾರಣೆ ತಂಡದಲ್ಲಿ ರಶೀದ್ ಇಲ್ಲ. ಆದರೆ ರಶೀದ್ ವಿರುದ್ಧ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.