ಬೆಂಗಳೂರು: ಗಣೇಶ ವಿಸರ್ಜನೆ ವೇಳೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಕೋಮುಗಲಭೆ ಬೆನ್ನಲ್ಲೇ ಮಂಡ್ಯ ಹೆಚ್ಚುವರಿ ಎಸ್‌ಪಿಯನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಬಿಡಿಸಿದೆ.
ಪೊಲೀಸ್ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕರ್ನಾಟಕ ಸರ್ಕಾರ ಮಂಡ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅವರನ್ನು ವರ್ಗಾವಣೆ ಮಾಡಿದೆ ಎಂದು ಪೊಲೀಸ್ ಮೂಲಗಳು ಶುಕ್ರವಾರ ತಿಳಿಸಿವೆ.
ಮದ್ದೂರಿನಲ್ಲಿ ನಡೆದ ಕೋಮು ಗಲಭೆಯ ಪರಿಣಾಮವಾಗಿ ಈ ವರ್ಗಾವಣೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಕಳೆದ ಭಾನುವಾರ (ಸೆಪ್ಟೆಂಬರ್ 7) ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದು ಕೋಮು ಉದ್ವಿಗ್ನತೆಗೆ ಕಾರಣವಾಯಿತು. ಈ ಘರ್ಷಣೆ ಸಂಬಂಧ 22ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇನ್ನೂ 7 ಮಂದಿಗಾಗಿ ಹುಟುಕಾಟ ಆರಂಭಿಸಿದೆ.
ಇನ್ನೂ ಕಲ್ಲು ತೂರಾಟ ಸಂಬಂಧ ಬಿಜೆಪಿ ಮದ್ದೂರು ಪಟ್ಟಣದಲ್ಲಿ ಬುಧವಾರ ಮತ್ತು ಗುರುವಾರ ಬೃಹತ್ ಪ್ರದರ್ಶನ ನಡೆಸಿತು. ಇದೀಗ ಈ ಬೆಳವಣಿಗೆ ಬೆನ್ನಲ್ಲೇ ಮಂಡ್ಯ ಹೆಚ್ಚುವರಿ ಎಸ್‌ಪಿಯನ್ನು ವರ್ಗಾವಣೆ ಮಾಡಲಾಗಿದೆ.