ಬೇಲಿಯೇ ಎದ್ದು ಹೊಲ ಮೆಯ್ದಂತೆ ಎನ್ನುವ ಹಾಗೇ ನಂಬಿಕೆ ಮೇರೆಗೆ ಸಾರ್ವಜನಿಕರೊಬ್ಬರು ಮಣಪ್ಪುರಂ ಗೋಲ್ಡ್ ಫೈನ್ಸಾನ್ ನಲ್ಲಿ ಅಡ ಇಟ್ಟಿದ್ದ ಚಿನ್ನಾಭರಣ ಕದ್ದಿದ್ದ ಮ್ಯಾನೇಜರ್ ನನ್ನ ನಂದಿನಿ ಲೇಔಟ್ ಪೊಲೀಸರು ಸೆರೆಹಿಡಿದಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಆಡಲು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಸುಮಾರು 40 ಗ್ರಾಂ ಚಿನ್ನ ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ. 25 ವರ್ಷದ ಸಿದ್ದೇಶ್ ಬಂಧಿತ ಮ್ಯಾನೇಜರ್. ತುಮಕೂರು ಮಧುಗಿರಿ ಮೂಲದ ಸಿದ್ದೇಶ್, ನಂದಿನಿ ಲೇಔಟ್ ನಲ್ಲಿ ವಾಸವಾಗಿದ್ದ. ಕಳೆದ ಎರಡೂವರೆ ವರ್ಷಗಳಿಂದ ಮ್ಯಾನೇಜರ್ ಆಗಿ ಮಲ್ಲೇಶ್ವರ ಬ್ರಾಂಚ್ ಸೇರಿದಂತೆ ವಿವಿಧ ಕಡೆಗಳಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಕ್ರಿಕೆಟ್ ಬೆಟ್ಟಿಂಗ್ ಆಡುವ ಚಟ ಹೊಂದಿದ್ದ ಸಿದ್ದೇಶ್, ಜೂಜು ಆಡಿ ಸೋತಿದ್ದ. ಸಾಲ ತೀರಿಸಲು ಉಪಾಯ ಹೂಡಿ, ತಾನು ಕೆಲಸ ಮಾಡುತ್ತಿದ್ದ ಬ್ರಾಂಚ್ ನಲ್ಲಿ ಗ್ರಾಹಕರೊಬ್ಬರು ಇರಿಸಿದ್ದ 40 ಗ್ರಾಂ ಚಿನ್ನ ಕದ್ದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದ. ಅಲ್ಲದೆ ಆಡಿಟಿಂಗ್ ವೇಳೆ 40 ಗ್ರಾಂ ಚಿನ್ನ ವ್ಯತ್ಯಾಸ ಅಗಿರುವುದು ಕಂಡು ಬಂದಿತ್ತು. ಪರಿಶೀಲನೆ ನಡೆಸಿದಾಗ ಬ್ರಾಂಚ್ ಮ್ಯಾನೇಜರ್ ಕೈ ಚಳಕವಿರುವುದು ಗೊತ್ತಾಗಿತ್ತು. ಈ ಸಂಬಂಧ ಮಣಪ್ಪುರಂ ಫೈನಾನ್ಸ್ ಕಚೇರಿಯ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ದೊಡ್ಡಬಳ್ಳಾಪುರದಲ್ಲಿ ತಲೆಮರೆಸಿಕೊಂಡಿದ್ದ ಮ್ಯಾನೇಜರ್ ನನ್ನ ಬಂಧಿಸಲಾಗಿದೆ.ಮ್ಯಾನೇಜರ್ ಕಳ್ಳತನ ಮಾಡಿದ್ದು ಇದೇ ಮೊದಲಲ್ಲ..ಈ ಹಿಂದೆ ಚಿನ್ನಾಭರಣ ಕದ್ದಿದ್ದಂತೆ. ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದ್ದ ಮ್ಯಾನೇಜರ್ ಲಕ್ಷಾಂತರ ರೂಪಾಯಿ ಹಣವನ್ನ ಕಳೆದುಕೊಂಡಿದ್ದ. ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಹೀಗಾಗಿ ಸಾಲ ತೀರಿಸಲು ಚಿನ್ನವನ್ನ ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.