ಬಾನಲ್ಲೇ ಮಧುಚಂದ್ರಕೆ ಎಂಬ ಸಿನಿಮಾ ಶೈಲಿಯಲ್ಲಿ ಪತ್ನಿಯನ್ನು ಪ್ರವಾಸಕ್ಕೆ ಕರೆದೊಯ್ದ ಕಾರಿನಲ್ಲೇ ಸ್ನೇಹಿತನ ಜೊತೆ ಸೇರಿ ವೇಲ್‍ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ ಆರೋಪಿ ಪತಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೃಥ್ವಿರಾಜ್(30) ಬಂಧಿತ ಆರೋಪಿ.
ತಲೆಮರೆಸಿಕೊಂಡಿರುವ ಈತನ ಸ್ನೇಹಿತ, ಬಿಹಾರ ಮೂಲದ ಸಮೀರ್ ಕುಮಾರ್‍ನ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ. ಬಿಕಾಂ ಪದವೀಧರೆ ಜ್ಯೋತಿಕುಮಾರಿ(38) ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಆ ಸಂದರ್ಭದಲ್ಲೇ ಪೃಥ್ವಿರಾಜ್‍ನನ್ನು ಪ್ರೀತಿಸಿ ಕಳೆದ ನವೆಂಬರ್‍ನಲ್ಲಿ ವಿವಾಹವಾಗಿದ್ದರು. ಇವರ ಮಧ್ಯೆ ವಯಸ್ಸಿನ ಅಂತರವಿತ್ತು. ಅಲ್ಲದೆ ದಂಪತಿ ನಡುವೆ ವೈಷಮ್ಯ ಉಂಟಾಗಿದೆ.
ಪತ್ನಿಯನ್ನು ಕೊಲೆ ಮಾಡಲು ನಿರ್ಧರಿಸಿದ ಪೃಥ್ವಿರಾಜ್ ಹಲವು ಯೋಜನೆಗಳನ್ನು ಹಾಕಿಕೊಂಡು ಆಕೆಯ ಮನವೊಲಿಸಿ ಹಾಲಿಡೇ ಟ್ರಿಪ್‍ಗೆ ಹೋಗಬೇಕೆಂದು ಹೇಳಿ ಪ್ರವಾಸಕ್ಕೆ ಒಪ್ಪಿಸಿದ್ದಾನೆ. ಆ.1ರಂದು ಝೂಮ್ ಕಾರನ್ನು ಬಾಡಿಗೆಗೆ ಪಡೆದುಕೊಂಡು ಪತ್ನಿ ಹಾಗೂ ಸ್ನೇಹಿತ ಸಮೀರ್‍ಕುಮಾರ್‍ನನ್ನು ಜೊತೆಗೆ ಕರೆದುಕೊಂಡು ಉಡುಪಿ ಬಳಿಯ ಮಲ್ಪೆ ಬೀಚ್‍ಗೆ ಹೋಗಿದ್ದಾನೆ.
ಅಲ್ಲಿನ ಹೋಟೆಲ್‍ವೊಂದರಲ್ಲಿ ರೂಂ ಪಡೆದುಕೊಂಡಿದ್ದು, ಹೋಟೆಲ್‍ನಲ್ಲಿ ಪತ್ನಿಯನ್ನು ಸಾಯಿಸಲು ಆಗಿಲ್ಲ. ನಂತರ ಮಲ್ಪೆ ಬೀಚ್‍ಗೆ ಹೋದಾಗ ಸಮುದ್ರದಲ್ಲಿ ಮುಳುಗಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದ. ಆದರೆ ಆ ಸ್ಥಳದಲ್ಲೂ ಅದು ಸಾಧ್ಯವಾಗಿಲ್ಲ.
ತದನಂತರ ಆ.2ರಂದು ಮಲ್ಪೆಯಿಂದ ಬೆಂಗಳೂರಿಗೆ ವಾಪಸ್ ಬರುವಾಗ ಮಾರ್ಗ ಮಧ್ಯದ ಶಿರಾಡಿಘಾಟ್‍ನ ರಾಜಘಟ್ಟದ ಬಳಿ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಜ್ಯೋತಿಕುಮಾರಿಯ ವೇಲ್‍ನಿಂದ ಕುತ್ತಿಗೆ ಬಿಗಿದು ಸ್ನೇಹಿತನ ನೆರವಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾನೆ.
ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಅರಣ್ಯ ಪ್ರದೇಶದಲ್ಲಿ ಬಿಸಾಕಿ, ಸಾಕ್ಷ್ಯ ನಾಶಪಡಿಸಿ ವಾಪಸ್ ಬೆಂಗಳೂರಿಗೆ ಬಂದು, ಪತ್ನಿ ಕಾಣೆಯಾಗಿದ್ದಾಳೆ ಎಂದು ಮಡಿವಾಳ ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡ ಪೊಲೀಸರಿಗೆ ಪೃಥ್ವಿರಾಜ್ ಮೇಲೆಯೇ ಶಂಕೆ ವ್ಯಕ್ತವಾಗಿದೆ. ಆತನ ನಡವಳಿಕೆಯ ಬಗ್ಗೆ ಅನುಮಾನ ಬಂದು ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ, ಪ್ರವಾಸಕ್ಕೆ ಕರೆದೊಯ್ದು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.