Select Your Language

Notifications

webdunia
webdunia
webdunia
webdunia

ಮಹಾನುಭಾವ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ

ಮಹಾನುಭಾವ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ
bangalore , ಶನಿವಾರ, 25 ಡಿಸೆಂಬರ್ 2021 (20:25 IST)
ಇಂದು ನಮ್ಮ ಕಾಲಮಾನದಲ್ಲಿ ನಾವು ಕಂಡ ಶ್ರೇಷ್ಠ ರಾಜಕಾರಣಿ, ಪ್ರಧಾನಮಂತ್ರಿ,  ಕವಿ, ವಾಗ್ಮಿ, ಸಹೃದಯಿ, ಮಾನವತಾವಾದಿ, ನಿಷ್ಠಾವಂತ ಕಾರ್ಯಕರ್ತ, ಸರಳಜೀವಿ ಅಪೂರ್ವ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. 
ವಾಜಪೇಯಿ 2018 ವರ್ಷದ, ಆಗಸ್ಟ್ 16ರಂದು ಹೋಗಿಬಿಟ್ಟರು.  ಅದಕ್ಕೂ ಒಂದು ದಶಕದ ಹಿಂದಿನಿನದಲೇ  ಅನಾರೋಗ್ಯದಿಂದ ನಮ್ಮ ಬದುಕಿನ ಕಣ್ಣಿಗೆ ಅಜ್ಞಾತರಾಗಿದ್ದರು. ಅವರಂತಹ ಒಬ್ಬ ಶ್ರೇಷ್ಠ ಪ್ರಧಾನಿ ನಾವಿರುವ ದೇಶವನ್ನು ಆಳಿದ್ದರು ಎಂಬ ಕೃತಜ್ಞತೆ ಇಲ್ಲದೆ, ನಮ್ಮ ಸಮಾಜ  ಅವರ ಸರ್ಕಾರವನ್ನೇ  ಸೋಲಿಗೀಡುಮಾಡಿತು ಎಂಬುದು ಬಹಳಷ್ಟನ್ನು ಹೇಳುತ್ತದೆ.  ಒಂದು ದೇಶವಾದ ನಾವು ಈ ಕುರಿತು ಆತ್ಮವಿಮರ್ಶೆ ಮಾಡಿಕೊಂಡು, ಇನ್ನೂ ಆಳವಾಗಿ ದುಃಖಿಸಿ, ನಮ್ಮ ಸಮಾಜದ ಪಾಪವನ್ನು ಕಳೆದುಕೊಳ್ಳುವ ಅಗತ್ಯ ಇನ್ನೂ, ಇನ್ನೂ, ಇನ್ನೂ ಬಹಳಷ್ಟು ಹೆಚ್ಚಿದೆ.  
ಒಮ್ಮೆ ಪ್ರಧಾನಿಯಾಗಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದ್ವಜಾರೋಹಣ ಮಾಡಿ ಮಾತನಾಡಿದ್ದ ವಾಜಪೇಯಿ ಅವರು “ನಾನೊಬ್ಬ ಶಿಕ್ಷಕನ ಮಗ, ಇಂದು ಪ್ರಧಾನಿ ಆಗಿದ್ದೇನೆ. ಈ ದೇಶದ ಋಣವನ್ನು ತೀರಿಸಬೇಕಿದೆ” ಎಂಬರ್ಥದಲ್ಲಿ ಮಾತನಾಡಿದ್ದರು.  ಆದರೆ ಈ ಮಹಾನುಭಾವ ದೇಶಕ್ಕೆ ಮಾಡಿದ ಸೇವೆಯ ಋಣ ನಮ್ಮೆಲ್ಲರ ಮೇಲೆ ತುಂಬಾ ಇದೆ.  ಇಂತಹ ಒಬ್ಬ ವ್ಯಕ್ತಿ ಪ್ರಧಾನಿಯಾಗಿದ್ದರು, ಪ್ರಧಾನಿಯಾಗಿಯೂ ಸರಳರಾಗಿದ್ದರು, ಪ್ರಧಾನಿ ಸ್ಥಾನದಿಂದ ಮೂರು ಬಾರಿ ಇಳಿದಾಗಲೂ ಅದನ್ನು ವಿನಮ್ರವಾಗಿ, ಯಾವುದೇ ಖೇದವನ್ನೂ ಪರಿಭಾವಿಸದೆ ನಿಸ್ಪ್ರಹತೆಯನ್ನು ಮೆರೆದರು.  ಒಮ್ಮೆ ನಮ್ಮ ನೆರೆ ರಾಷ್ಟ್ರದ ದುಷ್ಕೃತ್ಯಕ್ಕೆ  ಇನ್ನೇನು ಯುದ್ಧದ ಮೂಲಕವೇ ಪ್ರತ್ಯುತ್ತರ  ನೀಡಬಹುದು ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ, ಯುದ್ಧದ ಭೀಕರತೆಗೆ ಮನಗೊಡದೆ ಶಾಂತಿಯ ಕಹಳೆ ಊದಿದರು.  ಪರಮಾಣು ಪರೀಕ್ಷಣವನ್ನು ನಾವು ಯುದ್ಧಕ್ಕೆ ಬಳಸಲು ಮಾಡುತ್ತಿಲ್ಲ, ಶಾಂತಿಯ ಸ್ಥಾಪನೆಯ ಸಿದ್ಧತೆಯಾಗಿ ಮಾಡಿಕೊಳ್ಳುತ್ತಿದ್ದೇವೆ ಎಂದು ನಿರೂಪಿಸಿ,  ಇಡೀ ವಿಶ್ವ ವಿಧಿಸಿದ್ದ ಬಹಿಷ್ಕಾರಗಳೆಲ್ಲವೂ ತಾನೇ ತಾನಾಗಿ  ಉದುರಿಹೋಗುವಂತೆ ಮಾಡಿದ್ದು ಸಾಮಾನ್ಯ ಸಂಗತಿಯಲ್ಲ.  ಅಷ್ಟೊಂದು  ವಿಭಿನ್ನ ಪಕ್ಷಗಳ ವಿಭಿನ್ನ ಪ್ರಭೃತಿಗಳು ತುಂಬಿದ್ದರೂ  ಅವರೆಲ್ಲರನ್ನೂ  ತಮ್ಮ  ಆಂತರಿಕ ಅಯಸ್ಕಾಂತೀಯ ಶಕ್ತಿಯಲ್ಲಿ ಒಟ್ಟಿಗೆ  ನಡೆಸುವುದು ಇನ್ಯಾರಿಗೂ ಸಾಧ್ಯ ಎಂದು ಊಹಿಸುವುದಕ್ಕೂ ಸಾಧ್ಯವಿಲ್ಲ.  ಪ್ರಧಾನಿ ಸ್ಥಾನದಲ್ಲಿದ್ದಾಗಲೂ ಸ್ವಯಂ ಸೇವಕ ಸಂಘದ ಒಂದು ಕಾರ್ಯಕ್ರಮದಲ್ಲಿ ಕಾರ್ಯಕರ್ತನಾಗಿ ಪಾಲ್ಗೊಳ್ಳುವಾಗ  ಎಲ್ಲರೊಂದಿಗೆ  ಒಂದು ಸಾಮಾನ್ಯ ಕೋಣೆಯಲ್ಲಿ ಮಲಗಿದ್ದ ಮಗುವಿನಂತಹ ನಿಷ್ಕಲ್ಮಶ ಹೃದಯಿ ಆತ.  ಅಬ್ದುಲ್ ಕಲಮ್ ಅಂತಹ ಶ್ರೇಷ್ಠ ವಿಜ್ಞಾನಿ – ಸಜ್ಜನನನ್ನು ರಾಷ್ಟ್ರಪತಿಯಾಗಿ ಕೊಡುಗೆ ಕೊಡುವುದೂ ಕೂಡಾ ಅವರಿಗಷ್ಟೇ ಸಾಧ್ಯವಾಯಿತು.  ದೇಶವನ್ನು ಶ್ರೇಷ್ಠ ಮಟ್ಟದ ರಸ್ತೆ ಸಂಪರ್ಕಗಳ ಮೂಲಕ  ಒಂದುಗೂಡಿಸುವುದು ಅವರ ಭವ್ಯಕಲ್ಪನೆಯ  ಕಾವ್ಯದಂತೆಯೇ ಬೆಳಗಿತು.  ನದಿಗಳನ್ನೂ ಜೋಡಿಸುವ ಅವರ ಬೃಹತ್ ಕನಸೂ ಕೂಡಾ ಎಂತಹ ಭವ್ಯವಾಗಿತ್ತು ಎಂದು ಯೋಚಿಸಿದರೇ ರೋಮಾಂಚನವಾಗುತ್ತದೆ.  
ವಾಜಪೇಯಿ ಭಾಷಣ ಅಂದರೆ  ನಮಗೆ ಹಿಂದೀ ಅರ್ಥ ಆಗದಿದ್ದಾಗಿಯೂ ಏನೋ ಒಂದು ಸಂಗೀತ ಕೇಳುತ್ತಿರುವ   ತೆರನಾದ ಹೃದ್ಭಾವ ಮೂಡುತ್ತಿತ್ತು.  ಅದನ್ನು ಯಾರೋ ಒಬ್ಬರು ತರ್ಜುಮೆ ಮಾಡುತ್ತಿದ್ದರೆ, ಆ ತರ್ಜುಮೆ ಬೇಡವೇ ಬೇಡ  ಎಂದು ಅನ್ನಿಸುವಷ್ಟು ತೀವ್ರತೆ ನಮ್ಮಲ್ಲಿರುತ್ತಿತ್ತು.  ಅವರ ಕವಿತೆಗಳಲ್ಲಿ “ನನ್ನ ಗೆಳೆಯನೊಬ್ಬ ನನ್ನನ್ನರಸಿ ಬಂದಾಗ ಆತನನ್ನು ನಾನಪ್ಪಿಕೊಳ್ಳದಿರುವಷ್ಟು ನನ್ನನ್ನು ದೊಡ್ಡವನನ್ನಾಗಿ ಮಾಡಬೇಡ ಪ್ರಭುವೇ” ಎಂದು ನುಡಿದಿರುವ  ಭಾವ  ಅವರಿಗೆ  ಅತ್ಯಂತ   ಸಹಜವಾದ  ನಡೆಯೇ ಆಗಿತ್ತು.  ನೆಹರೂ ಮತ್ತು  ಇಂದಿರಾಗಾಂಧೀ ಅವರುಗಳಿಗೆ  ಇವನಂತಹ ವಿರೋಧಿ ಇರುವುದೂ ನಮ್ಮ  ಸೌಭಾಗ್ಯ ಎಂಬ  ಭಾವ ಇತ್ತು ಎಂಬುದು ಸುಳ್ಳಲ್ಲ.  ವಾಜಪೇಯಿ ಅವರು ಪಾರ್ಲಿಮೆಂಟಿನಲ್ಲಿರಲಿ ಅಥವಾ  ಸಾರ್ವಜನಿಕ ಸಭೆಯಲ್ಲೇ ಇರಲಿ ಮಾತನಾಡುವಾಗ ಪ್ರಾರಂಭದಲ್ಲಿ ಮೂಡುತ್ತಿದ್ದ ಅಲೆಯಂತಹ ಮರ್ಮರಗಳೆಲ್ಲ  ವಿಸ್ಮಯಕಾರಕವೋ ಎಂಬಂತೆ  ಪ್ರಶಾಂತ ಕಿವಿಗಳಾಗಿ ಪರಿವರ್ತಿತಗೊಳ್ಳುತ್ತಿದ್ದವು ಎಂಬುದನ್ನು ಯೋಚಿಸುವಾಗ  ಅದರ ಹಿಂದಿದ್ದ  ಅದ್ಭುತ ತಪಸ್ವೀ ಶಕ್ತಿಗೆ ನಮಿಸಬೇಕಿನಿಸುತ್ತದೆ. 
“ಹುತ್ತಗಟ್ಟದೆ ಅಂತಹ ಚಿತ್ತ ಕೆತ್ತಿದ್ದೀತೆ.”  ಭಾರತಮಾತೆಯೇ “ನಿನ್ನ ಭಾಗ್ಯವೇ ಭಾಗ್ಯವಮ್ಮ”.  ಇಂತಹ ಸುಪುತ್ರ  ನಿನ್ನ ಮಗನಾಗಿ ನಮ್ಮ ಮಧ್ಯೆ ಇದ್ದದ್ದು  ನಿನಗೆ ತುಂಬಾ ಸಂತಸ ತಂದಿದ್ದಿರಬೇಕು.  ಉಳಿದ ನಾವು ಹಾಗಾಗಲಿಲ್ಲವಲ್ಲ  ಎಂಬ ವ್ಯಥೆಯೂ  ನಿನ್ನಲ್ಲಿದ್ದೀತು.  ಏನು ಮಾಡುವುದು ವಾಜಪೇಯಿ ಒಬ್ಬರೇ ಒಬ್ಬರು.  ಆ ಮಹಾನ್ ಚೇತನಕ್ಕೆ ತಲೆಬಾಗುವುದಷ್ಟೇ  ನಮಗೆ ಸಾಧ್ಯ.

Share this Story:

Follow Webdunia kannada

ಮುಂದಿನ ಸುದ್ದಿ

15 ವರ್ಷದ ಬಾಲಕಿಯನ್ನು ಮದುವೆಯಾಗಿ ಅತ್ಯಾಚಾರ