ಮಂಡ್ಯ: ಮದ್ದೂರು ತಾಲ್ಲೂಕಿನ ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ನಡೆದ ಕೃಷ್ಣೇಗೌಡನ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ತಮ್ಮನನ್ನು ಕೊಲೆ ಮಾಡಲು ಸ್ವಂತ ಅಣ್ಣನೇ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ.
ಫೆ.11ರಂದು ನಡೆದಿದ್ದ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ 8 ಆರೋಪಿಗಳನ್ನು ಬಂಧಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳನ್ನು ಮೃತ ಕೃಷ್ಣೇಗೌಡನ ಅಣ್ಣನಾದ ಅರ್ಚಕ ಶಿವನಂಜೇಗೌಡ (ಗುಡ್ಡಪ್ಪ), ಮಳವಳ್ಳಿ ತಾಲ್ಲೂಕು ನಿಟ್ಟೂರು ಗ್ರಾಮದ ಚಂದ್ರಶೇಖರ ಎನ್.ಎಸ್., ಆಟೊ ಚಾಲಕ ಸುನಿಲ್ ಬಿ.ಎನ್., ಮರದ ವ್ಯಾಪಾರಿ ಕೆ.ಪಿ.ಉಲ್ಲಾಸ್‌ಗೌಡ, ಆಬಲವಾಡಿ ಗ್ರಾಮದ ಕೂಲಿ ಕಾರ್ಮಿಕ ಪ್ರತಾಪ ಎ.ಎಂ., ಆಟೊ ಚಾಲಕ ಕೆ.ಎಂ.ಅಭಿಷೇಕ್, ಕಾರು ಚಾಲಕ ಕೆ.ಶ್ರೀನಿವಾಸ, ರಾಮನಗರ ಜಿಲ್ಲೆ ಜಕ್ಕೇಗೌಡನದೊಡ್ಡಿಯ ಎಚ್.ಹನುಮೇಗೌಡ ಬಂಧಿತ ಆರೋಪಿಗಳು.
ಹತ್ಯೆಯಾದ ಕೃಷ್ಣೇಗೌಡ ಮಾಡಿದ್ದ ಸಾಲವನ್ನು ಅಣ್ಣ ಶಿವನಂಜೇಗೌಡ ತೀರಿಸಿದ್ದ. ಇದರ ಸಲುವಾಗಿ ತನ್ನ ಜಮೀನನ್ನು ಶಿವನಂಜೇಗೌಡಗೆ ಪತ್ನಿ ಹೆಸರಿಗೆ ಬರೆದುಕೊಟ್ಟಿದ್ದ. ಆದರೆ ಆನಂತರ ಜಮೀನನ್ನು ಅವರ ವಶಕ್ಕೆ ಬಿಡದೆ ಕೃಷ್ಣೇಗೌಡ ಜಗಳ ತೆಗೆದಿದ್ದ. ತನ್ನ ಅಕ್ಕ ತಂಗಿಯರನ್ನು ಪುಸಲಾಯಿಸಿ ಶಿವನಂಜೇಗೌಡನ ವಿರುದ್ಧ ಜಮೀನು ವಿಚಾರದಲ್ಲಿ ಕೇಸು ಹಾಕಿಸಿದ್ದ. ಇದರಿಂದ ಮನನೊಂದ ಶಿವನಂಜೇಗೌಡ ತಮ್ಮನನ್ನು ಕೊಲೆ ಮಾಡಲು ₹5 ಲಕ್ಷಕ್ಕೆ ಸುಪಾರಿ ನೀಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಇನ್ನು ಕೊಲೆ ಪ್ರಕರಣದಲ್ಲಿ ತಾನೂ ಭಾಗಿಯಾಗಿರುವ ವಿಚಾರ ತಿಳಿಯಬಾರದೆಂದು ಸ್ನೇಹಿತರೊಂದಿಗೆ ಶಿವನಂಜೇಗೌಡ ಪ್ರಯಾಗ್‌ರಾಹ್‌ಗೆ ತೆರಳಿ ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದ. ಗ್ರಾಮಸ್ಥರು ನೀಡಿದ ಸುಳಿವಿನ ಮೇರೆಗೆ ಚಂದ್ರಶೇಖರ್ ಎನ್.ಎಸ್. ಎಂಬುವನನ್ನು ಮೊದಲು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇತರ ಆರೋಪಿಗಳ ಮಾಹಿತಿ ಹೊರಬಿದ್ದಿದೆ.