ನವದೆಹಲಿ: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಿರ್ಜಾಪುರ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಮಹಾಕುಂಭ ಭಕ್ತರ ಸಾವಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಸಂತಾಪ ಸೂಚಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಷ್ಟ್ರಪತಿಗಳು ಹೀಗೆ ಬರೆದಿದ್ದಾರೆ, "ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಿರ್ಜಾಪುರ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅನೇಕ ಜನರ ಸಾವಿನ ಸುದ್ದಿ ದುರದೃಷ್ಟಕರವಾಗಿದೆ. ಮೃತರ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಶುಕ್ರವಾರ ತಡರಾತ್ರಿ ಮಹಾಕುಂಭಮೇಳಕ್ಕೆ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಕಾರು ಪ್ರಯಾಗ್‌ರಾಜ್-ಮಿರ್ಜಾಪುರ ಹೆದ್ದಾರಿಯಲ್ಲಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹತ್ತು ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.
"ಭಕ್ತರು ಛತ್ತೀಸ್‌ಗಢದಿಂದ ಬಂದು ಮಹಾಕುಂಭಕ್ಕೆ ಹೋಗುತ್ತಿದ್ದಾಗ ಅವರ ವಾಹನ ಬಸ್‌ಗೆ ಡಿಕ್ಕಿ ಹೊಡೆದಿದೆ. ಅವರಲ್ಲಿ 10 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ" ಎಂದು ಯಮುನಾನಗರ ಪೊಲೀಸ್ ಉಪ ಆಯುಕ್ತ (ಡಿಸಿಪಿ), ವಿವೇಕ್ ಚಂದ್ರ ಯಾದವ್ ಹೇಳಿದ್ದಾರೆ.
ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ವರೂಪ್ ರಾಣಿ ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತದ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ಸಿಎಂಒ ಬಿಡುಗಡೆ ಮಾಡಿದ ಪ್ರಕಾರ ಮೃತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ