ಬೆಂಗಳೂರು : ಬೋರ್ ವೆಲ್ ಗಳಿಂದ ಟ್ಯಾಂಕರ್ ಗಳನ್ನು ತುಂಬಿಸಿ ನೀರು ಪೂರೈಕೆ ಮಾಡುತ್ತಿರುವ ಎಲ್ಲಾ ಖಾಸಗಿ ಟ್ಯಾಂಕರ್ ಮಾಲಿಕರೂ ಸಹ ಇದಕ್ಕೆ ಪರವಾನಗಿ ಪಡೆಯಬೇಕು. ಆರ್‌ಟಿಓ ,ಸಂಚಾರ ಪೊಲೀಸ್ ಇಲಾಖೆ ಮತ್ತು ಜಲಮಂಡಳಿಯ ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಲಾಗಿದೆ. ಎಲ್ಲಲ್ಲಿ ಕೊಳವೆ ಬಾವಿಗಳಿವೆ ಅವುಗಳನ್ನು ಗುರುತಿಸಿ ಅವುಗಳನ್ನು ಪರವಾನಗಿ ವ್ಯಾಪ್ಪಿಗೆ ಒಳಪಡಿಸಲಾಗುವುದು. ನನ್ನ ಇಲಾಖೆ ಅನುದಾನದಿಂದ ಬೆಂಗಳೂರಿನ ಎಲ್ಲಾ ಕ್ಷೇತ್ರಗಳಿಗೆ ಕುಡಿಯುವ ನೀರು ಪೂರೈಕೆಗೆ 10 ಕೋಟಿ ರೂ. ನೀಡಲಾಗಿದೆ ಎಂದರು. ಈ ಕುರಿತು ಸೋಮವಾರ ಮಧ್ಯಾಹ್ನ ಹಿರಿಯ ಅಧಿಕಾರಿಗಳ ಸಭೆ ಕರೆದಿರುವುದಾಗಿ ಡಿಕೆಶಿ ಹೇಳಿದರು.
ರಾಜ್ಯದಲ್ಲಿ ದಿನೇ ದಿನೇ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಪರಿಸ್ಥಿತಿಯ ಲಾಭ ಪಡೆದು ಖಾಸಗಿ ನೀರಿನ ಟ್ಯಾಂಕರ್ ಗಳು ದುಬಾರಿ ಬೆಲೆಗೆ ನೀರನ್ನು ಮಾರಾಟ ಮಾಡುತ್ತಿದೆ. ನೀರು ಪೂರೈಕೆ ಟ್ಯಾಂಕರ್ ಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್ ಹೊಸ ಕ್ರಮ ಕ್ಕೆ ಮುಂದಾಗಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟ್ಯಾಂಕರ್ ಗಳ ಮಾಫಿಯಾ ನಿಯಂತ್ರಿಸಲು ಸೂಕ್ತ ನೀತಿ ರಚಿಸಲು ಬಿಬಿಎಂಪಿಗೆ ಆದೇಶಿಸಲಾಗಿದ್ದು, ಟ್ಯಾಂಕರ್ ಗಳನ್ನು ಸರ್ಕಾರವೇ ಸುಪರ್ದಿಗೆ ಪಡೆಯಲಿದೆ. ಮಾ. 7ರ ಒಳಗೆ ಪರವಾನಗಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.