Select Your Language

Notifications

webdunia
webdunia
webdunia
webdunia

ಕನ್ನಡಿಗರಿಗೆ ಎಂ.ಬಿ.ಬಿ.ಎಸ್ ಸೀಟು; ಮೀಸಲು ಸಂಬಂಧ ಮಹತ್ವದ ಸಭೆ

ಕನ್ನಡಿಗರಿಗೆ ಎಂ.ಬಿ.ಬಿ.ಎಸ್ ಸೀಟು; ಮೀಸಲು ಸಂಬಂಧ ಮಹತ್ವದ ಸಭೆ
ಬೆಂಗಳೂರು , ಬುಧವಾರ, 19 ಜೂನ್ 2019 (14:58 IST)
ಕೇಂದ್ರ ಸರ್ಕಾರ ಜಾರಿಗೆ ತಂದ ನೀಟ್ ಪದ್ಧತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸುಗಳ ಪ್ರವೇಶ ಗಗನ ಕುಸುಮವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇಕಡಾ 50 ರಷ್ಟು ಸೀಟುಗಳನ್ನು ಮೀಸಲಿಡುವಂತೆ ಕೋರಲು ರಾಜ್ಯ ಸರ್ಕಾರ ಮಹತ್ವದ ಸಭೆ ಕರೆದಿದೆ.

ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಜತೆ ಜೂನ್ 20 ರ ಗುರುವಾರ ಮಧ್ಯಾಹ್ನ 3 ಗಂಟೆಗೆ ವಿಕಾಸಸೌಧದ ಕೊಠಡಿ ಸಂಖ್ಯೆ 242 ರಲ್ಲಿ ಸರ್ಕಾರ ಮಾತುಕತೆ ನಡೆಸಲಿದೆ.

ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ಪ್ರಮುಖರು, ಸ್ವಾಯತ್ರ ವಿ.ವಿ.ಗಳ ಆಡಳಿತ ಮಂಡಳಿ ಪ್ರಮುಖರು, ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಪ್ರಮುಖರು ಭಾಗವಹಿಸಲಿದ್ದಾರೆ.

ಈ ನಾಲ್ಕೂ ಬಗೆಯ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡಾ 50 ರಷ್ಟು ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಿಡುವ ಸಂಬಂಧ ಚರ್ಚಿಸಲಿರುವ ಸಚಿವ ತುಕಾರಾಂ, ಮಾತುಕತೆಯ ನಂತರ ಈ ಕುರಿತು ಅಧಿಕೃತ ಕಾಯ್ದೆಯನ್ನು ರೂಪಿಸಲು ಬಯಸಿದ್ದಾರೆ.

ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೀಟ್ ಪದ್ಧತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಶೇಕಡಾ ಐದರಷ್ಟು ವಿದ್ಯಾರ್ಥಿಗಳಿಗೂ ಕರ್ನಾಟಕದಲ್ಲಿ ಸೀಟು ದೊರೆಯುತ್ತಿಲ್ಲ.

ಬಹುತೇಕರಿಗೆ ಪರರಾಜ್ಯಗಳಲ್ಲಿ ಸೀಟು ಸಿಗುವುದರಿಂದ ಅವರು ಅಲ್ಲಿಗೆ ಹೋಗದೆ ಇಲ್ಲೇ ಬೇರೆ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ಕೆಲ ವರ್ಷಗಳಲ್ಲಿ ಕರ್ನಾಟಕದವೇ ಆದ ಡಾಕ್ಟರುಗಳ ಸಂಖ್ಯೆಯೇ ಕ್ಷೀಣಿಸಿಹೋಗುತ್ತದೆ ಎಂಬುದು ಸರ್ಕಾರದ ಆತಂಕ.

ಇದೇ ಆತಂಕದ ಹಿನ್ನೆಲೆಯಲ್ಲಿ ನೆರೆಯ ತಮಿಳ್ನಾಡು ಸರ್ಕಾರ ಕಾಯ್ದೆಯೊಂದನ್ನು ರೂಪಿಸಿ ಖಾಸಗಿ ವೈದ್ಯಕೀಯ ಕಾಲೇಜುಗಳು, ಸ್ವಾಯತ್ತ ವೈದ್ಯಕೀಯ ಕಾಲೇಜುಗಳು, ಸಭಾಷಾ ಅಲ್ಪಸಂಖ್ಯಾತ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳಲ್ಲಿ ನಿರ್ದಿಷ್ಟ ಪ್ರಮಾಣದ ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡುವಂತೆ ಮಾಡಿದೆ.

ಈಗ ತಮಿಳ್ನಾಡಿನ ಮಾದರಿಯಲ್ಲಿಯೇ ರಾಜ್ಯದ ವಿದ್ಯಾರ್ಥಿಗಳ ಹಿತ ರಕ್ಷಿಸಲು ಮುಂದಾಗಿರುವ ಸರ್ಕಾರ ಈ ಸಂಬಂಧ ಸರಣಿ ಸಭೆಗಳನ್ನು ನಡೆಸಿದ್ದು, ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಎಂ.ಡಿ ಸೀಟುಗಳಲ್ಲಿ ಶೇಕಡಾ 57 ರಷ್ಟನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಲು ಈ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಒಪ್ಪಿವೆ.

ಅದರ ಪ್ರಕಾರ ಸುಮಾರು 3500 ಎಂ.ಡಿ.ಸೀಟುಗಳ ಪೈಕಿ ಸುಮಾರು 1900 ಸೀಟುಗಳು ರಾಜ್ಯದ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ ಎಂದು ಮೂಲಗಳು ಹೇಳಿದ್ದು, ಎಂ.ಡಿ.ಸೀಟುಗಳ ರೀತಿಯೇ ಎಂ.ಬಿ.ಬಿ.ಎಸ್.ಕೋರ್ಸುಗಳ ಪ್ರವೇಶದಲ್ಲಿ ಶೇಕಡಾ 50 ರಷ್ಟು ಸೀಟುಗಳು ದಕ್ಕಿದರೆ ರಾಜ್ಯದ  ಎರಡು ಸಾವಿರ ಮಂದಿಗೆ ಪ್ರವೇಶಾವಕಾಶ ಲಭ್ಯವಾಗಲಿದೆ ಎಂದು ಮೂಲಗಳು ವಿವರಿಸಿವೆ.

 

Share this Story:

Follow Webdunia kannada

ಮುಂದಿನ ಸುದ್ದಿ

ರೋಷನ್ ಬೇಗ್ ಅಮಾನತು ಮಾಡಿದ್ದೆ ಸರಿ ಎಂದ ಸಚಿವ ಕೃಷ್ಣ ಭೈರೇಗೌಡ